×
Ad

ನಂದಿಕೂರು: ಸಮಾಲೋಚನಾ ಸಭೆ ಬಹಿಷ್ಕರಿಸಿದ ಗ್ರಾಮಸ್ಥರು

Update: 2016-11-05 22:00 IST

ನಂದಿಕೂರು, ನ.5: ಈಗಾಗಲೇ ಕೈಗಾರಿಕಾ ಪ್ರದೇಶವನ್ನು ನಂದಿಕೂರು ಗ್ರಾಮದ 86.64 ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿ, ಇಡೀ ಊರಿಗೆ ಮಾರಕವಾಗಿರುವ ಮಾಲಿನ್ಯಕಾರ ಉದ್ದಿಮೆಗಳ ಆರಂಭಕ್ಕೆ ಕದ್ದುಮುಚ್ಚಿ ಪರವಾನಿಗೆ ನೀಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಈಗ ಇಷ್ಟು ವರ್ಷಗಳ ಬಳಿಕ ಪರಿಸರ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ನಡೆಸಲು ಬಂದಿರುವುದರಿಂದ ಆಕ್ರೋಶಗೊಂಡ ನಂದಿಕೂರು, ಪಲಿಮಾರು ಹಾಗೂ ಆಸುಪಾಸಿನ ಗ್ರಾಮಸ್ಥರು ಸಭೆಯನ್ನೇ ಬಹಿಷ್ಕರಿಸಿ ಹೊರನಡೆದಿದ್ದಾರೆ.

ನಂದಿಕೂರಿನ ಆನಂದಿ ಸಭಾಭವನದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಎರಡೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಕೈಗಾರಿಕಾ ಪ್ರದೇಶದ ಕುರಿತು ಕೆಐಎಡಿಬಿಯ ಅಧಿಕಾರಿಯೊಬ್ಬರು ವಿವರಗಳನ್ನು ನೀಡಿದರು.

ಅಧಿಕಾರಿಯ ಪ್ರಾತ್ಯಕ್ಷಿಕೆ ಮುಗಿಯುತಿದ್ದಂತೆ ಎದ್ದುನಿಂತ ಪಲಿಮಾರು ಗ್ರಾಪಂ ಅಧ್ಯಕ್ಷ ಜೀತೇಂದ್ರ ಪುಟಾರ್ಡೊ ಅವರು ನಂದಿಕೂರಿನಲ್ಲಿ ಕೈಗಾರಿಕಾ ಪ್ರದೇಶ ಪ್ರಾರಂಭಗೊಂಡು ಈಗಾಗಲೇ ಎರಡು ವರ್ಷ ಕಳೆದಿದೆ. ಹತ್ತಾರು ಉದ್ದಿಮೆಗಳು ಈಗಾಗಲೇ ಆರಂಭಗೊಂಡಿದೆ. ಈಗ ನೀವು ಈ ಸಭೆ ಕರೆದುದರ ಉದ್ದೇಶ ಏನು ಎಂದು ಖಾರವಾಗಿ ಪ್ರಶ್ನಿಸಿದರು.

ಈ ಹಂತದಲ್ಲಿ ಸೇರಿದ್ದ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಇಲಾಖೆಗಳು,ಅಧಿಕಾರಿಗಳ ವಿರುದ್ಧ ಆಕ್ರೋಶದ ಕಿಡಿಗಳನ್ನೇ ಸಿಡಿಸಿದರು. ಈ ಹಂತದಲ್ಲಿ ಗ್ರಾಮಸ್ಥರ ಕ್ಷಮೆ ಕೋರಿದ ಇಲಾಖಾ ಅಧಿಕಾರಿಗಳು, ನಮ್ಮಿಂದ ತಪ್ಪಾಗಿದೆ. ಈಗ ನಿಮ್ಮ ದೂರು, ಸಲಹೆಗಳನ್ನೇಲ್ಲಾ ಕೇಳಿ ಅವುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ಜನರನ್ನು ಸಮಾಧಾನಿಸುವ ಪ್ರಯತ್ನ ನಡೆಸಿದರು.

ಆದರೆ ಅಧಿಕಾರಿಗಳತ್ತ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ ಜನತೆ ಅವರ ನಯವಾದ ಮಾತುಗಳಿಗೆ ಬಗ್ಗಲೇ ಇಲ್ಲ. ಜಿಲ್ಲಾಧಿಕಾರಿಗಳೂ ಮಧ್ಯಪ್ರವೇಶಿಸಿ, ಅವರು ತಪ್ಪಿಗಾಗಿ ಕ್ಷಮೆ ಕೋರಿದ್ದಾರೆ. ಅದನ್ನು ಸರಿಪಡಿಸಲು ಪ್ರಯತ್ನಿಸೋಣ ಎಂದು ಸಮಾಧಾನಿಸಿದರು.

ಈ ಕೈಗಾರಿಕಾ ಪ್ರದೇಶದಲ್ಲಿ ಕೇವಲ ಹಳದಿ ಮತ್ತು ಆರೆಂಜ್ ವಲಯ ಉದ್ದಿಮೆಗಳಿಗೆ ಮಾತ್ರ ಅವಕಾಶವೆಂದು ನೀವೇ ಈಗ ಹೇಳಿದ್ದೀರಿ. ಆದರೆ ಈಗಾಗಲೇ ಅಲ್ಲಿ ಅತ್ಯಂತ ಮಾಲಿನ್ಯಕಾರಕವಾದ ಆಸ್ಪತ್ರೆಯ ತ್ಯಾಜ್ಯ ಸಂಸ್ಕರಣ ಉದ್ದಿಮೆ, ಗೇರುಬೀಜ ತ್ಯಾಜ್ಯದ ಸಂಸ್ಕರಣೆ ಉದ್ದಿಮೆ ಬಂದಿದ್ದು ಇದರಿಂದ ಸುತ್ತಮುತ್ತಲಿನ 200ಕ್ಕೂ ಅಧಿಕ ಮನೆಗಳಿಗೆ ಆಗಿರುವ ತೊಂದರೆ ವರ್ಣಿಸಲಸದಳ. ಅದನ್ನು ಯಾರು ಸರಿಪಡಿಸುತ್ತೀರಿ ಎಂದು ಗ್ರಾಮಸ್ಥರು ವಿಶೇಷವಾಗಿ ಮಹಿಳೆಯರು ನೇರವಾಗಿ ಪ್ರಶ್ನಿಸಿದರು.

ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ, ತ್ಯಾಜ್ಯ ಸಂಸ್ಕರಣೆ ನಡೆಯುತ್ತಿಲ್ಲ. ಎಲ್ಲವನ್ನೂ ತೋಡುಗಳ ಮೂಲಕ ನಾವು ಕುಡಿಯುವ ನೀರು ಪಡೆಯುವ ಶಾಂಭವಿ ಹೊಳೆಗೆ ಬಿಡಲಾಗುತ್ತದಿದೆ. ಅದರಿಂದ ನಾವು ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. ಪರಿಸರ ಇಡೀ ವಾಸನೆಯಿಂದ ಬದುಕಲು ಸಾಧ್ಯವಿಲ್ಲ. ಎಲ್ಲ ಆರೋಗ್ಯವೂ ಹಾಳಾಗಿದೆ ಎಂದು ಪರಿಸರ ಹೋರಾಟಗಾರ ಲಕ್ಷ್ಣಣ್ ಶೆಟ್ಟಿ, ಗ್ರಾಪಂ ಸದಸ್ಯರಾದ ಕೃಷ್ಣ ಕುಮಾರ್ ಶೆಟ್ಟಿ ದೂರಿದರು.

ಮೊದಲು ಅಲ್ಲಿರುವ ಮಾಲಿನ್ಯಕಾರಕ ಉದ್ದಿಮೆಗಳನ್ನು ಮುಚ್ಚಿ ಮತ್ತೆ ಹೊಸದಾಗಿ ಪರಿಸರ ಪೂರಕ ಉದ್ದಿಮೆಗಳನ್ನು ಪ್ರಾರಂಭಿಸುವುದಾದರೆ ನಾವು ಒಪ್ಪುತ್ತೇವೆ. ಅವುಗಳನ್ನು ಬಂದ್ ಮಾಡದಿದ್ದರೆ, ನಮ್ಮ ಕಣ್ಣೊರೆಸುವ ಈ ಸಭೆ ಖಂಡಿತ ಬೇಡ, ನಾವು ಬಹಿಷ್ಕರಿಸುತ್ತೇವೆ ಎಂದು ಪುಟಾರ್ಡೊ ಅವರು ಘೋಷಿಸಿ, ಗ್ರಾಮಸ್ಥರೊಂದಿಗೆ ತೆರಳಿದರು.

ಇನ್ನದ ಎಂ.ಪಿ.ಮೊಯ್ದಿನಬ್ಬ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಆಯುಷ್ ಎನ್ವಿರೊಟೆಕ್ನಿಕ್ ಎಂಬ ಆಸ್ಪತ್ರೆ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಆಗುತ್ತಿರುವ ತೊಂದರೆಗಳ ಪಟ್ಟಿಯನ್ನೇ ಜಿಲ್ಲಾಧಿಕಾರಿ ಮುಂದೆ ಮಂಡಿಸಿದರು. ಅದೊಂದು ಅತ್ಯಂತ ಮಾಲಿನ್ಯಕಾರಕ ಘಟಕವಾಗಿದ್ದು ಅದಕ್ಕೆ ಹೇಗೆ ಇಲ್ಲಿ ಅವಕಾಶ ನೀಡಲಾಯಿತು. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಕಾರ್ಖಾನೆಯೊಳಗೆ ಗ್ರಾಮಸ್ಥರಿಗೆ ಪ್ರವೇಶವಿಲ್ಲ. ಅಲ್ಲಿ 25 ನಾಯಿಗಳನ್ನು ಸಾಕಿಕೊಂಡು ಅದನ್ನ್ನು ಛೂಬಿಡುತಿದ್ದಾರೆ ಎಂದರು.

ಇವರು ಬಿಡುವ ತ್ಯಾಜ್ಯ ನೇರವಾಗಿ ಹೊಳೆಗೆ ಹೋಗುತಿದ್ದು ಇದರಿಂದ ಆಸುಪಾಸಿನ 8-10 ಗ್ರಾಮಗಳ ಸಾವಿರಾರು ಅಂಗನವಾಡಿ ಮಕ್ಕಳು ಆರೋಗ್ಯ ಸಮಸ್ಯೆ, ಅಸ್ತಮಾ, ಕೆಮ್ಮಿಗೆ ತುತ್ತಾಗಿದ್ದಾರೆ. ಈ ಬಗ್ಗೆ 1200 ಅರ್ಜಿಗಳನ್ನು ಜಿಲ್ಲಾಧಿಕಾರಿಗೆ ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲಿ ಆಸ್ಪತ್ರೆಯ ತ್ಯಾಜ್ಯ ಮಾಂಸ, ಮೂಲೆ, ಮಗುವಿನ ಅಂಗಾಂಗ ಬಿದ್ದಿರುತ್ತದೆ. ಅದನ್ನು ಸುಡುವಾಗ ಕೆಟ್ಟ ವಾಸನೆ ಇಡೀ ಪರಿಸರಕ್ಕೆ ವ್ಯಾಪಿಸುತ್ತದೆ ಎಂದರು.
ಬೇಕಿದ್ದರೆ ನೀವು ಈಗಲೇ ಬೇಟಿ ನೀಡಿ ಕಣ್ಣಾರೆ ಕಂಡುಬನ್ನಿ ಎಂದು ಸವಾಲು ಹಾಕಿದರು. ಅವರ ಮಾತಿಗೆ ಪರಿಸರದ ನಿವಾಸಿಗಳಾದ ವೀಣಾ ವಿ.ಶೆಟ್ಟಿ ಹಾಗೂ ಇತರ ಮಹಿಳೆಯರು ಧ್ವನಿಗೂಡಿಸಿದರು. ಕೊನೆಗೆ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಪರಿಸರದ ವಾಸನಾ ಕೇಂದ್ರ

ಜಿಲ್ಲಾಧಿಕಾರಿ ಅವರು ಸಭೆಯಿಂದ ನೇರವಾಗಿ ಕೈಗಾರಿಕಾ ಪ್ರದೇಶದಲ್ಲಿರುವ ಆಯುಷ್‌ಗೆ ಭೇಟಿ ನೀಡಿದರು. ಈ ಬೇಟಿಯ ಮಾಹಿತಿಯನ್ನು ಮೊದಲೇ ಅರಿತಿದ್ದ ಮಾಲಕ ಹಾಸನದವರಾದ ಮಾರುತಿ ಅವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದು ಕಂಡುಬಂತು.

ಇಡೀ ಪರಿಸರ ಅತ್ಯಂತ ವಾಸನಾಮಯವಾಗಿದ್ದು, ಪರಿಸರದ ಗಿಡಮರಗಳ ಮೇಲೆ, ಎಲೆಗಳ ಮೇಲೆ ಕಪ್ಪು ತ್ಯಾಜ್ಯದ ಪರಿಣಾಮ ಎದ್ದು ಕಾಣುತ್ತಿತ್ತು. ಆಸ್ಪತ್ರೆಯ ತ್ಯಾಜ್ಯಗಳು ಅಲ್ಲಲ್ಲಿ ಇದ್ದು, ಕಾರ್ಯಾಚರಣೆ ಕುರಿತು ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಮ್ಮಿಂದ ಯಾವುದೇ ಮಾಲಿನ್ಯ ನಡೆಯುತ್ತಿಲ್ಲ ಎಂದವರು ಹೇಳಿಕೊಂಡರು. ಅವರ ಪರವಾಗಿ ಇಲಾಖೆಯ ಅಧಿಕಾರಿಗಳೂ ಬ್ಯಾಟಿಂಗ್ ನಡೆಸುತ್ತಿರುವುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News