ಮಾಹಿತಿ ನಿರಾಕರಣೆ ಹಕ್ಕು ಬೇಕು ಎಂದ ಸುಪ್ರೀಂಕೋರ್ಟ್ ನ್ಯಾಯಾಧೀಶ

Update: 2016-11-06 03:19 GMT

ಹೊಸದಿಲ್ಲಿ, ನ.6: ವ್ಯಕ್ತಿಗಳ ಖಾಸಗಿತನವನ್ನು ಉಳಿಸುವ ಸಲುವಾಗಿ ಆಡಳಿತ ನಡೆಸುವವರು ಮಾಹಿತಿ ನಿರಾಕರಿಸುವ ಹಕ್ಕಿನ ಬಗ್ಗೆ ಚಿಂತನೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಸಲಹೆ ಮಾಡಿದ್ದಾರೆ.

ಮಾಧ್ಯಮಗಳು ಏನನ್ನು ವರದಿ ಮಾಡಬೇಕು ಹಾಗೂ ಯಾವುದನ್ನು ವರದಿ ಮಾಡಬಾರದು ಎಂದು ವಿಭಜಿಸುವ ರೇಖೆ ಎಳೆಯಲು ಇದೀಗ ಸೂಕ್ತ ಸಮಯ ಬಂದಿದೆ. ಅಣುಬಾಂಬ್‌ನಂಥ ಅಸ್ತ್ರ ಮಾಧ್ಯಮಗಳ ಕೈಯಲ್ಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ" ಎಂದು ಲಾಯ್ಡ ಕಾನೂನು ಕಾಲೇಜಿನಲ್ಲಿ ಶನಿವಾರ ಕಾನೂನು ಆಯೋಗದ ಸಮ್ಮೇಳನ ಉದ್ಘಾಟಿಸಿ ಮಾತನಾಡುವ ವೇಳೆ ಸ್ಪಷ್ಟಪಡಿಸಿದರು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆಯಾಗುವ ದೇಶದ್ರೋಹ ಹಾಗೂ ಮಾನಹಾನಿಯಂಥ ಕಾನೂನುಗಳ ಪರಾಮರ್ಶೆ ನಡೆಸುವ ಸಲುವಾಗಿ ಈ ಸಮ್ಮೇಳನ ಆಯೋಜಿಸಲಾಗಿತ್ತು.

"ಜನರಿಗೆ ಮಾಹಿತಿ ವಿರುದ್ಧದ ಹಕ್ಕು ಇದೆ. ಇದು ಮುಖ್ಯ ಕೂಡಾ. ಇಂದಿನ ಇಂಟರ್‌ನೆಟ್ ಹಾಗೂ ಸಾಮಾಜಿಕ ಮಾಧ್ಯಮ ಯುಗದಲ್ಲಿ ಈ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ. ಮಾಹಿತಿ ಹಕ್ಕು ಎಲ್ಲೆ ಮೀರಬಾರದು" ಎಂದು ನ್ಯಾಯಮೂರ್ತಿ ಮಿಶ್ರಾ ಸ್ಪಷ್ಟಪಡಿಸಿದರು.

ಒಬ್ಬ ವ್ಯಕ್ತಿಯ ಆರೋಗ್ಯ, ಚಿಕಿತ್ಸೆ, ಚಿಕಿತ್ಸಾ ವೆಚ್ಚದ ಬಗ್ಗೆ ವಿಚಾರಿಸುವ ಮೂಲಕ ಯಾವ ಸಾರ್ವಜನಿಕ ಹಿತಾಸಕ್ತಿ ಕಾಪಾಡಿದಂತಾಗುತ್ತದೆ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಬೇರೆ ಉದ್ದೇಶಕ್ಕೆ ಇದನ್ನು ಕೇಳಲಾಗುತ್ತದೆ ಎಂದು ವಿಶ್ಲೇಷಿಸಿದರು. ಬ್ರೇಕಿಂಗ್ ನ್ಯೂಸ್‌ಗಾಗಿ ಸುದ್ದಿವಾಹಿನಿ ಹಾಗೂ ವೆಬ್‌ಸೈಟ್‌ಗಳ ನಡುವೆ ಅನಾರೋಗ್ಯಕರ ಪೈಪೋಟಿ ಇದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳು ನಿಖರ ಮಾಹಿತಿ ಸಂಗ್ರಹದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News