ಪಾಸ್‌ಪೋರ್ಟ್ ಮಾಡಿಸುವಾಗ ಕಡಿಮೆಯಾಗಲಿದೆ ಇನ್ನೊಂದು ಕಿರಿಕಿರಿ, ಕಿರುಕುಳ

Update: 2016-11-06 03:27 GMT

ಹೊಸದಿಲ್ಲಿ, ನ.6: ಪಾಸ್‌ಪೋರ್ಟ್ ಮಾಡಿಸುವಾಗ ಜನಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಮಹಿಳೆಯರು ಎದುರಿಸುತ್ತಿದ್ದ ಕಿರುಕುಳಕ್ಕೆ ಸದ್ಯದಲ್ಲೇ ತಡೆ ಬೀಳಲಿದೆ.

ಪಾಸ್‌ಪೋರ್ಟ್ ಕಚೇರಿಗಳಲ್ಲಿ ವಿಧಿವಿಧಾನಗಳಿಂದ ಮಹಿಳೆಯರಿಗೆ ಆಗುತ್ತಿದ್ದ ಕಿರುಕುಳ ಹಾಗೂ ಕಿರಿಕಿರಿ ತಪ್ಪಿಸಲು ಅರ್ಜಿದಾರರ ತಂದೆ, ತಾಯಿ ಅಥವಾ ಗಂಡ/ ಹೆಂಡತಿ ಹೆಸರು ಮುದ್ರಿಸುವ ಕ್ರಮವನ್ನು ಕೈಬಿಡುವಂತೆ ಅಂತರ ಸಚಿವಾಲಯ ಸಮಿತಿ, ವಿದೇಶಾಂಗ ಸಚಿವಾಲಯಕ್ಕೆ ಸಲಹೆ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಇರುವ ವಿಧಾನಗಳಿಗೆ ಅನುಗುಣವಾಗಿ ಭಾರತದ ವಿದೇಶಾಂಗ ಸಚಿವಾಲಯ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಭಾರತ ಅಥವಾ ವಿದೇಶಗಳಲ್ಲಿ ಇಮಿಗ್ರೇಶನ್ ಉದ್ದೇಶಕ್ಕೆ ಈ ಮಾಹಿತಿಗಳು ಅಪ್ರಸ್ತುತ. ಬಹುತೇಕ ದೇಶಗಳ ಪಾಸ್‌ಪೋರ್ಟ್ ದಾಖಲೆಯಲ್ಲಿ, ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪಾಸ್‌ಪೋರ್ಟ್‌ಗಳಲ್ಲಿ, ತಂದೆ ಅಥವಾ ಕಾನೂನುಬದ್ಧ ಪೋಷಕರು, ತಾಯಿ, ಪತಿ/ ಪತ್ನಿ ಅಥವಾ 35ನೆ ಪುಟದಲ್ಲಿ ಮುದ್ರಣವಾಗುವ ಇತರ ಮಾಹಿತಿಗಳನ್ನು ಕೇಳುವುದಿಲ್ಲ ಎಂದು ವಿವರಿಸಿದೆ.

ಈ ಮಾಹಿತಿಗಳು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಬೇಕಿದ್ದರೂ, ಇದನ್ನು ಪಾಸ್‌ಪೋರ್ಟ್ ಪುಸ್ತಕದಲ್ಲಿ ಮುದ್ರಿಸುವ ಅಗತ್ಯವಿಲ್ಲ. ಈ ಪುಟದ ಮಾಹಿತಿಯ ಬಗ್ಗೆ ಬಹಳಷ್ಟು ಮಂದಿ ಮಹಿಳೆಯರಿಂದ ದೂರು ಬಂದಿದೆ ಎಂದು ವಿವರಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಪಾಸ್‌ಪೋರ್ಟ್ ಸಂಸ್ಥೆಯ ಅಧಿಕಾರಿಗಳು ಈ ಸಮಿತಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News