ಮೇ ತಿಂಗಳಿಂದ ಮಂಗಳೂರು-ಬೆಂಗಳೂರು ಹೆಚ್ಚುವರಿ ರೈಲು ಆರಂಭ: ಸಂಸದ ನಳಿನ್

Update: 2016-11-06 06:00 GMT

ಪುತ್ತೂರು, ನ.6: ನೈಋತ್ಯ ರೈಲ್ವೆಯ ಮಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಬಕ ಪುತ್ತೂರು ರೈಲು ನಿಲ್ದಾಣವು ಹೊಸ ಸೌಲಭ್ಯಗಳೊಂದಿಗೆ ಆದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸೇವಾ ವ್ಯವಸ್ಥೆಗಳು ಪೂರ್ಣಗೊಂಡು ಶನಿವಾರ ಉದ್ಘಾಟನೆಗೊಂಡಿತು.

ಗೋವಾ ರಾಜ್ಯದ ಮಡಂಗಾವ್ ರೈಲು ನಿಲ್ದಾಣದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭಾಕರ ಪ್ರಭು ವೀಡಿಯೋ ಕಾನ್ಫರೆನ್ಸ್ ಮೂಲಕ ಆದರ್ಶ ರೈಲು ನಿಲ್ದಾಣವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪುತ್ತೂರಿನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ರಾಮನಗರದಲ್ಲಿ ಟ್ರ್ಯಾಕ್ ಸಮಸ್ಯೆಯಿಂದಾಗಿ ಮಂಗಳೂರು- ಬೆಂಗಳೂರು ಹೆಚ್ಚುವರಿ ರೈಲು ಸಂಚಾರ ಸಾಧ್ಯವಾಗಿರಲಿಲ್ಲ. ಇದೀಗ ಸಮಸ್ಯೆ ಬಗೆಹರಿಯುತ್ತಿದ್ದು ಮುಂಬರುವ ಮೇ ತಿಂಗಳಿನಿಂದ ಹೆಚ್ಚುವರಿ ರೈಲು ಆರಂಭವಾಗಲಿದೆ. ಬೆಂಗಳೂರು ರೈಲು ಮೈಸೂರು ಮಾರ್ಗವಾಗಿ ಹೋಗದೆ ನೇರವಾಗಿ ಹೋಗಲಿರುವುದರಿಂದ ಕೇವಲ 10 ಗಂಟೆಯಲ್ಲಿ ಬೆಂಗಳೂರಿಗೆ ಪ್ರಯಾಣ ಸಾಧ್ಯವಾಗಲಿದೆ ಎಂದರು.

ರೈಲ್ವೆ ಇಲಾಖೆ ಲಾಭದತ್ತ ಸಾಗಲು ಖಾಸಗಿ ಸಹಭಾಗಿತ್ವದ ಅಗತ್ಯವಿದೆ ಎಂದ ಅವರು ಮುಂದಿನ ದಿನಗಳಲ್ಲಿ ರೈಲ್ವೇ ಇಲಾಖೆಯು ಪಿಪಿಪಿ ಮಾದರಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ರೈಲ್ವೇ ನಿಲ್ದಾಣದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸಚಿವರಾಗಿದ್ದ ಡಿ.ವಿ. ಸದಾನಂದ ಗೌಡ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಸುರೇಶ್ ಪ್ರಭಾಕರ ಪ್ರಭು ಅವರ ಸಹಕಾರವನ್ನು ಸ್ಮರಿಸಿದ ಸಂಸದರು ಎಲ್ಲರೂ ಕಾಮಗಾರಿಗೆ ವೇಗ ಸಿಗುವಂತೆ ಮಾಡಿದರು. ಇದರಿಂದಾಗಿ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ರೈಲು ನಿಲ್ದಾಣವಾಗಿ ಮಾರ್ಪಾಡು ಮಾಡಲು ಸಾಧ್ಯವಾಯಿತು ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಈ ಭಾಗದ ಜನರ ಬಹುಕಾಲದ ನಿರೀಕ್ಷೆಯಾಗಿದ್ದ ಆದರ್ಶ ರೈಲು ನಿಲ್ದಾಣ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆಗೊಂಡಿದೆ. ರೈಲು ನಿಲ್ದಾಣ ಸಂಪರ್ಕ ರಸ್ತೆಯೂ ಅಭಿವೃದ್ಧಿಯಾಗಬೇಕಾಗಿದೆ. ಇದಕ್ಕಾಗಿ ತಾನು 5 ಲಕ್ಷ ರೂ. ಅನುದಾನ ವ್ಯವಸ್ಥೆಗೊಳಿಸಿದ್ದು, ಸಂಸದರು ಹಾಗೂ ನಗರಸಭೆಯ ಸಹಯೋಗದಲ್ಲಿ ರಸ್ತೆ ಕಾಮಗಾರಿ ನಡೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಆದರ್ಶ ರೈಲು ನಿಲ್ದಾಣಕ್ಕೆ ಕಾರಣಕರ್ತರಾದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

ರೈಲ್ವೇ ನಿಲ್ದಾಣದ ಸ್ವಚ್ಚತಾಗಾರರಿಗೆ ಮಾತಾನಂದಮಯಿ ಟ್ರಸ್ಟ್ ವತಿಯಿಂದ ಸೀರೆ ವಿತರಣೆ ಮಾಡಲಾಯಿತು. ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ನೈರುತ್ಯ ರೈಲ್ವೇಯ ಮೈಸೂರು ವಿಭಾಗದ ಡಿಆರ್‌ಎಂ ಅತುಲ್ ಗುಪ್ತಾ, ಇಂಜಿನಿಯರ್ ಅನಂದ ಬಾರ್ತಿ, ರೈಲ್ವೇ ಅಧಿಕಾರಿ ಗೋಪ ಮತ್ತಿತರರು ಉಪಸ್ಥಿತರಿದ್ದರು. 

ಉಪನ್ಯಾಸಕ ಡಾ. ರಾಜೇಶ್ ಬೆಜ್ಜಂಗಳ ಸ್ವಾಗತಿಸಿ ವಂದಿಸಿದರು. ಹರ್ಷಿತಾ ಬೆಜ್ಜಂಗಳ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News