×
Ad

ಇಡೀ ವಿಶ್ವ ಸುತ್ತುತ್ತೀರಿ.. ನಮ್ಮೂರಿನ ಜನರ ಸಂಕಟವನ್ನು ಬಂದು ನೋಡಬಾರದೇ?

Update: 2016-11-06 13:05 IST

ಹೊಸದಿಲ್ಲಿ, ನ.6: 10 ವರ್ಷದ ಪೋರನೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರ ಈಗ ಇಡೀ ದೇಶದ ಗಮನ ಸೆಳೆದಿದೆ.

ಒಡಿಶಾದ ಆದಿವಾಸಿ ಜನರೇ ಬಹುಸಂಖ್ಯೆಯಲ್ಲಿರುಬವ ಮಲ್ಕಾನ್ ಗಿರಿ ಜಿಲ್ಲೆಯ ಉಮೇಶ್ ಮಾಧಿ ಎಂಬ ನಾಲ್ಕನೆ ತರಗತಿಯ ಹುಡುಗ ಪ್ರಧಾನಿ ಕೋದಿಯವರಿಗೆ ಈ ಪತ್ರ ಬರೆದಿದ್ದಾನೆ. ಈ ಜಿಲ್ಲೆಯ 508 ಗ್ರಾಮಗಳಲ್ಲಿ ಜಪಾನೀ ಜ್ವರಕ್ಕೆ (ಜಪಾನೀ ಎನ್ ಸೆಫಲಿಟೀಸ್) 73 ಮಕ್ಕಳು ಇತ್ತೀಚೆಗೆ ಬಲಿಯಾಗಿರುವುದು ಇದಕ್ಕೆ ಕಾರಣ.

ಮಲ್ಕಾನ್ ಗಿರಿ ಜಿಲ್ಲೆಯ ವೈದ್ಯಾಧಿಕಾರಿ ಉಮಾಶಂಕರ್  ಮಿಶ್ರ ಅವರ ಪ್ರಕಾರ ಈ ಜಪಾನೀ ಜ್ವರಕ್ಕೆ ಬಲಿಯಾಗಿರುವ ಮಕ್ಕಳ ಸಂಖ್ಯೆ 27 ಮಾತ್ರ. ಉಳಿದವರ ಮೃತ್ಯು ಇತರ ಕಾರಣಗಳಿಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಮಾಧಿ ಸಿಕಾಪಲೀ ಗ್ರಾಮದ ಪ್ರಾಥಮಿಕ ಶಾಲೆಯೊಂದರ ನಾಲ್ಕನೆ ತರಗತಿಯ ವಿದ್ಯಾರ್ಥಿ ಉಮೇಶ್ ಮಾದಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾನೆ. ಅದರಲ್ಲಿ “ನೀವು ವಿಶ್ವದೆಲ್ಲೆಡೆ ಭೇಟಿ ನೀಡುತ್ತಿದ್ದೀರಿ. ನಮ್ಮ ಊರಿಗೆ ದಯವಿಟ್ಟು ಬನ್ನಿ. ಇಲ್ಲಿ ಜನರು ಸಾಯುತ್ತಿದ್ದಾರೆ. ನನ್ನ ಸ್ನೇಹಿತರು ಈ ಜಪಾನೀ ಜ್ವರಕ್ಕೆ ಬಲಿಯಾಗಿದ್ದಾರೆ. ಇವರ ಸಂಕಟವನ್ನು ನೀವು ಬಂದು ನೋಡಬಾರದೇ?, ನಮಗಿರುವ ಭರವಸೆ ನೀವೊಬ್ಬರೇ” ಎಂದು ಹೇಳಿದ್ದಾನೆ.

ಮಲ್ಕಾನ್ ಗಿರಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಒಡಿಶಾ ರಾಜ್ಯಸರಕಾರವೇ ಒಪ್ಪಿಕೊಂಡಿದೆ. ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಸರಕಾರ ನಿಯೋಜಿಸಿರುವ ವಿಶೇಷ ಅಧಿಕಾರಿ ನೃಪರಾಜ್ ಸಾಹು ಅವರೇ ಎಲ್ಲಾ ಪ್ರಯತ್ನಗಳ ಹೊರತಾಗಿಯೂ  ಪರಿಸ್ಥಿತಿ ಸುಧಾರಿಸಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News