ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ: ಐತ್ತೂರು ಪಂಚಾಯತ್ ಅಧ್ಯಕ್ಷ

Update: 2016-11-06 09:17 GMT

ಕಡಬ, ನ.6: ಭ್ರಷ್ಟರ ರಕ್ಷಣೆಗೆ ಬಿಜೆಪಿ ನಿಂತಿದೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ರೈ ಕೆರ್ಮಾಯಿ  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು ಹಾಸ್ಯಸ್ಪದವಾಗಿದ್ದು, ಭ್ರಷ್ಟಚಾರಗಳಿಗೆ ಯಾವ ಪಕ್ಷ ಬೆಂಬಲಕೊಡುತ್ತಿದೆ ಎಂದು ಹಳ್ಳಿಯಿಂದ ದಿಲ್ಲಿಯ ತನಕ ಕಳೆದ ಲೋಕಾಸಭಾ ಚುನಾವಣೆಯಲ್ಲಿ ಎಲ್ಲಾ ಜನರಿಗೆ ತಿಳಿದಿದೆ ಎಂದು ಐತ್ತೂರು ಪಂಚಾಯತ್ ಅಧ್ಯಕ್ಷ ಸತೀಶ್ ಕೆ. ಲೇವಡಿ ಮಾಡಿದರು.

ಅವರು ರವಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ನನ್ನ ಮೇಲೆ ಕಡಬ ಬ್ಲಾಕ್ ಕಾಂಗ್ರೇಸ್ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಪಿ ಮೋಹನ್ ಹಾಗೂ ಇನ್ನಿತರ ರಾಜಕೀಯ ದ್ವೇಷದಿಂದ ಅವ್ಯವಹಾರದ ಆರೋಪ ಹೊರಿಸಿ ಸುಳ್ಳು ದಾಖಲೆಗಳನ್ನು ನೀಡಿ ರಾಜಕೀಯ ಶಕ್ತಿ ಬಳಸಿ ನನ್ನ ಗ್ರಾಮ ಪಂಚಾಯತ್ ಸದಸ್ಯತ್ವವನ್ನು ರದ್ದತಿ ಮಾಡಿದ್ದಾರೆ. ಆದರೆ ಇದಕ್ಕೆ ಈಗಾಗಲೇ ಉಚ್ಛ ನ್ಯಾಯಲಯ ತಡೆಯಾಜ್ಞೆ ನೀಡಿದ್ದು, ನಾನು ಅವ್ಯವಹಾರ ಮಾಡಿದ್ದರೆ ನನಗೆ ನ್ಯಾಯಾಲಯವು ತಡೆಯಾಜ್ಞೆ ನೀಡುತ್ತಿರಲಿಲ್ಲ. ಮೊದಲು ರಾಜಕೀಯ ದ್ವೇಷ ಬಿಟ್ಟು ಇದನ್ನು ಅರ್ಥೈಸಿಕೊಳ್ಳಲಿ ಹಾಗೂ ನನ್ನ ಮೇಲೆ ನಿರಂತರವಾಗಿ ಇನ್ನಿತರ ಹಲವು ಆರೋಪಗಳನ್ನು ಮಾಡುತ್ತಿರುವ ಕಡಬ ಕಾಂಗ್ರೇಸ್ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಪಿ. ಮೋಹನ್ ಎಷ್ಟು ಒಳ್ಳೆಯವ ಎಂದು ವಿಜಯಕುಮಾರ್ ರೈ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. 1979 ರಲ್ಲಿ ಉಡುಪಿಯಲ್ಲಿ ದರೋಡೆ ಮಾಡಿ ಆ ನಂತರ ಕಾಂಗ್ರೇಸ್ ಬೆಂಬಲದಿಂದ ಕಡಬ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಇದೇ ಕೆ.ಪಿ. ಮೋಹನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸುಮಾರು 26 ಲಕ್ಷ ಅವ್ಯವಹಾರ ಮಾಡಿರುವುದು ಈ ವಿಜಯಕುಮಾರರಿಗೆ ತಿಳಿದಿಲ್ಲವೇ. ನನ್ನ ಮೇಲೆ ವಿನಾಕಾರಣ ಆರೋಪ ಹೊರಿಸುತ್ತಿರುವ ಕೆ.ಪಿ. ಮೋಹನ್ ಚೇಲಗಳಿಗೆ ಕಾರ್ಣಿಕದ ಕ್ಷೇತ್ರವಾದ ಕೊಡಿಂಬಾಳದ ಮಜ್ಜಾರಿನಿಂದ ಸತ್ಯ ಪ್ರಮಾಣಕ್ಕೆ ನೋಟಿಸ್ ನೀಡಿದರೂ, ಆ ದಿನ ತಪ್ಪಿಸಿಕೊಳ್ಳುತ್ತಿರುವುದು ಯಾಕೆ....? ಗಂಟಗೋಷವಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡುವ ವ್ಯಕ್ತಿಗಳು ಮಜ್ಜಾರು ಕ್ಷೇತ್ರಕ್ಕೆ ಬಂದು ಸತ್ಯ ಪ್ರಮಾಣ ಮಾಡಲಿ. ಅವಾಗ ಯಾರು ಭ್ರಷ್ಟರು ಅಂತ ಅಲ್ಲಿಯೇ ತಿಳಿಯುತ್ತದೆ. ಹಿಂದು ಧರ್ಮದಲ್ಲಿ ಹುಟ್ಟಿ ದೇವರ ಮೇಲೆ ನಂಬಿಕೆ ಇದ್ದರೆ ವಿಜಯಕುಮಾರ್ ರೈಯವರು ತನ್ನ ಐತ್ತೂರಿನ ಪಕ್ಷದ ಮುಖಂಡರನ್ನು ಸತ್ಯ ಪ್ರಮಾಣಕ್ಕೆ ಕರೆದುಕೊಂಡು ಬನ್ನಿ. ಅಲ್ಲಿ ಸತ್ಯ ಪ್ರಮಾಣ ಮಾಡುವ, ಯಾರು ಭ್ರಷ್ಟಾಚಾರಿಗಳೆಂದೂ, ಯಾರು ಅವ್ಯವಾರ ಮಾಡಿದ್ದಾರೆಂದು ತಿಳಿಯುತ್ತದೆ. ಐತ್ತೂರು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಹಾಗೂ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿರುವ ನಿಮಗೆ ಸತ್ಯ ಪ್ರಮಾಣವೇ ಒಂದೇ ದಾರಿ. ಇಲ್ಲವೊ ಐತ್ತೂರಿನ ಜನತೆಯ ಕ್ಷಮೆಯಾಚಿಸಿ ರಾಜಕೀಯ ನಿವೃತಿ ಪಡೆಯಿರಿ ಎಂದರು.

18 ವರ್ಷಗಳ ಕಾಲ ಕಾಂಗ್ರೇಸ್ನಲ್ಲಿದ್ದು ಕಡಬ ಬಾಕಿನ ಕಾರ್ಮಿಕ ಘಟಕದ ಅಧ್ಯಕ್ಷನಾಗಿ ಪ್ರಾಮಾಣಿಕ ಸೇವೆ ಮಾಡಿ 2010 ರಲ್ಲಿ ಜಿಲ್ಲಾ ಪಂಚಾಯತ್ (ಹಿಂದುಳಿದ ಮಹಿಳೆ ಎ) ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ನೀವು ಮಾಡಿದ ಅನ್ಯಾಯಕ್ಕೆ ನೊಂದು ಕಾಂಗ್ರೇಸ್ ತೊರೆದು ರಾಜೀನಾಮೆ ನೀಡಿ ಬಿಜಿಪಿಗೆ ಸೇರಿದ್ದೇನೆ. ನೀವು ಪತ್ರಿಕಾ ಹೇಳಿಕೆಯಲ್ಲಿ ಭ್ರಷ್ಟಾಚಾರ ಮಾಡಿದಕ್ಕೆ ಕಾಂಗ್ರೇಸ್‌ನಿಂದ ಅಂದಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಉಚ್ಛಾಟನೆ ಮಾಡಿದ್ದಾರಂತ ಹೇಳಿದಿರಿ. ಆದರೆ ನಾನು ಕೂಡ ಬ್ಲಾಕ್ ಕಾಂಗ್ರೇಸ್‌ನ ಕಾರ್ಮಿಕರ ಘಟಕದ ಅಧ್ಯಕ್ಷನಾಗಿದ್ದವ. ನನ್ನನು ಪಕ್ಷದಿಂದ ಉಚ್ಛಾಟಿಸಬೇಕಾದರೆ ನನಗೆ ಜಿಲ್ಲಾ ಸಮಿತಿಯಿಂದ ನೋಟೀಸ್ ನೀಡಿ ಸಮಾಂಜಸ ಉತ್ತರ ನೀಡದಿದ್ದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷರು ಪಕ್ಷದಿಂದ ಉಚ್ಛಾಟನೆ ಮಾಡಬೇಕಾಗುತ್ತದೆ. ಈ ನಿಯಮವನ್ನು ಇನ್ನಾದರೂ ಕಡಬ ಕಾಂಗ್ರೇಸ್‌ನ ಅಧ್ಯಕ್ಷ ವಿಜಯ ಕುಮಾರ್ ರೈ ತಿಳಿದುಕೊಳ್ಳಲಿ. ಈ ವಿಚಾರದ ಅಂದಿನ ಪತ್ರಿಕೆ ಕೂಡ ಇಂದು ನನ್ನ ಕೈಯಲ್ಲಿದ್ದು, ಅದು ಕೂಡ ಸತ್ಯ ಪ್ರಮಾಣ ಆಗಲಿ ಎಂದರು.

ಕಾಂಗ್ರೆಸ್ ನಾನಿರುವಾಗ ನಡೆದ ನಿಮ್ಮ ಭೂಮಿಯ ವಿಚಾರವನ್ನು ಒಮ್ಮೆ ಮೆಲುಕು ಹಾಕಿ. ಆಗ ಈ ಭಷ್ಟಾಚಾರಿಯೇ ನಿಮಗೆ ಸಹಾಯ ಮಾಡಿದ್ದು ಎಂದು ಈಗಾಲಾದರೂ ನೆನಪಿಸಿಕೊಳ್ಳಿ. ಆ ಸಮಯದಲ್ಲಿ ಮಂಗಳೂರಿನ ಬಿಜೆಪಿ ಮುಖಂಡರ ಕಾಲಿಗೆ ಬಿದ್ದು ಸಹಾಯ ಬೇಡಿದ್ದನ್ನು ಕೂಡ ಈ ಸಂದರ್ಭದಲ್ಲಿ ನೆನಪಿಕೊಳ್ಳವುದು ಒಳಿತು. ತನ್ನ ಮಾತೃ ಗ್ರಾಮ ಪಂಚಾಯತ್ ಮರ್ಧಾಳದಲ್ಲಿ ಆಡಳಿತವನ್ನು ತಮ್ಮ ಪಕ್ಷದಲ್ಲಿ ಉಳಿಸಿಕೊಳ್ಳಲು ಯೋಗ್ಯತೆ ಇಲ್ಲದವರು ಇನ್ನೊಬ್ಬರ ಬಗ್ಗೆ ಮಾತನಾಡುವ ಅಗತ್ಯವಿರುವುದಿಲ್ಲ. ನಿಮಗೆನಾದರೂ ತಾಕತ್ತು ಮತ್ತು ಬಿಜೆಪಿಗರ ಬಗ್ಗೆ ಮಾತಾಡುವ ಮೊದಲು ನೀವೂ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷನಾಗಿ ಯಾವ ರೀತಿ ಇದ್ದೀರಿ ಎಂದು ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಅನಂತರ ಬಿಜೆಪಿಗರ ಬಗ್ಗೆ ಮಾತನಾಡಿ. ನ್ಯಾಯಾಂಗದ ಮೇಲೆ ನಿಮಗೆ ನಂಬಿಕೆ ಇದ್ದರೆ ಹೋರಾಟ ಮಾಡೋಣ. ಅದಕ್ಕೆ ನಾನು ತಯಾರಿದ್ದೇನೆ. ಪತ್ರಿಕಾಗೋಷ್ಟಿಯಲ್ಲಿ ನಿಮ್ಮ ಪಕ್ಕ ಕುಳಿತ ಮನಮೋಹನ್ ಗೋಳ್ಯಾಡಿ ಹಾಗೂ ಇಸ್ಮಾಯೀಲ್ ಸುಂಕದಕಟ್ಟೆ 2011ರಲ್ಲಿ ಐತ್ತೂರು ಪಂಚಾಯತ್ ಆಡಳಿತ ಮಂಡಳಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಇದ್ದವರು. ನಾನು ಅವ್ಯವಹಾರ ಮಾಡಿದ್ದರೆ ಅವರಿಗೂ ಪಾಲು ಸಿಗಬೇಕಲ್ಲ. ಅವರು ಭ್ರಷ್ಟಾಚಾರಿಗಳಲ್ಲವೇ ಎಂದು ಯೋಚಿಸಿಕೊಳ್ಳಿ. ಪಂಚಾಯತ್ ನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಒಬ್ಬನೇ ಅವ್ಯವಹಾರ ಮಾಡಲಿಕ್ಕೆ ಸಾಧ್ಯವಿಲ್ಲ. ಇದಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ನ ಸದಸ್ಯರು ಕೈಜೋಡಿಸಬೇಕು. ಇದು ಯಾವುದೂ ಇಲ್ಲದೆ ಕೇವಲ ನಾನೊಬ್ಬನೇ ಅವ್ಯವಹಾರ ಮಾಡಲು ಹೇಗೆ ಸಾಧ್ಯ. ಇದನ್ನಾದರೂ ಮುಂದಿನ ದಿನಗಳಲ್ಲಿ ಅರಿತುಕೊಳ್ಳುವುದು ಸೂಕ್ತ. ಮುಂದಿನ ದಿನಗಳಲ್ಲಿ ಯಾರು ಭ್ರಷ್ಟಾಚಾರಿಗಳು ಎಂಬುವುದಕ್ಕೆ ಕಾಲವೇ ಉತ್ತರ ಕೊಡಲಿದೆ. ಅಲ್ಲದೆ ಐತ್ತೂರು ಗ್ರಾಮ ಪಂಚಾಯತ್ ನಲ್ಲಿ ಸತತ ನಾಲ್ಕು ಬಾರಿ ಪಂಚಾಯತ್ ಸದಸ್ಯನಾಗಿ ಮೂರು ಬಾರಿ ಅಧ್ಯಕ್ಷನಾಗಿ ಐತ್ತೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ರಾತ್ರಿ ಹಗಲು ದುಡಿಯುತ್ತಿರುವ ನನ್ನ ಕಾರ್ಯ ವೈಖರಿಯನ್ನು ಸಹಿಸಲಾಗದೆ ನನ್ನ ವಿರೋಧಿಗಳು ಈ ರೀತಿಯ ಹೇಳಿಕೆ ನೀಡುವುದನ್ನು ಇನ್ನಾದರೂ ದೂರ ಮಾಡಲಿ. ಈ ಎಲ್ಲಾ ವಿದ್ಯಮಾನಗಳನ್ನು ಐತ್ತೂರಿನ ಜನತೆ ಹಾಗೂ ದಿನ ಪತ್ರಿಕೆ ಓದುವವರು ಬಹಳ ಹತ್ತಿರದಿಂದ ಗಮನಿಸುತ್ತಾರೆ. ಅವರೇ ನಿಮಗೆ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಐತ್ತೂರು ಗ್ರಾಮ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಅತ್ಯಡ್ಕ, ಉಪಾಧ್ಯಕ್ಷರಾದ ಗಣೇಶ ಮೂಜೂರು, ಕಾರ್ಯದರ್ಶಿ ಪೂವಪ್ಪ ಗೌಡ ಅಂತಿಬೆಟ್ಟು, ಬಿಜೆಪಿ ಸುಂಕದಕಟ್ಟೆ ಬೂತ್ ಅಧ್ಯಕ್ಷ ಪುರುಷೋತ್ತಮ ಮೂಜೂರು, 3ನೇ ಬೂತ್ ಅಧ್ಯಕ್ಷ ಜಯರಾಮ ಕಡಮ್ಮಾಜೆ, ತಮಿಳು ಘಟಕದ ಅಧ್ಯಕ್ಷರಾದ ತಿರುಪತಿ ಯನ್.ಕೋಪ್, ಅಲ್ಪಸಂಖ್ಯಾತ ಘಟಕದ ಶರ್ಫುದ್ದೀನ್, ಗ್ರಾ.ಪಂ.ಸದಸ್ಯರಾದ ಧರ್ಮಪಾಲ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News