×
Ad

ಹಿಂದುಗಳ ಮೇಲೆ ದಾಳಿ:ಹಸೀನಾ ಜೊತೆ ಚರ್ಚೆಗೆ ಭಾರತೀಯ ರಾಯಭಾರಿಗೆ ಸ್ವರಾಜ್ ನಿರ್ದೇಶ

Update: 2016-11-06 17:04 IST

ಹೊಸದಿಲ್ಲಿ,ನ.6: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಮತ್ತೆ ದಾಳಿಗಳು ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಆ ರಾಷ್ಟ್ರದಲ್ಲಿನ ಹಿಂದು ಸಮುದಾಯದ ಸುರಕ್ಷತೆಯ ಬಗ್ಗೆ ಭಾರತದ ತೀವ್ರ ಕಳವಳವನ್ನು ಪ್ರಧಾನಿ ಶೇಖ್ ಹಸೀನಾ ಅವರಿಗೆ ತಿಳಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಢಾಕಾದಲ್ಲಿರುವ ಭಾರತೀಯ ರಾಯಭಾರಿಗೆ ನಿರ್ದೇಶ ನೀಡಿದ್ದಾರೆ.

 ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಮತ್ತೆ ದಾಳಿಗಳು ನಡೆಯತೊಡಗಿದ್ದು, ಮಧ್ಯ ಬ್ರಹ್ಮನ್‌ಬಾರಿಯಾ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಕೆಲವು ಹಿಂದುಗಳ ಮನೆಗಳಿಗೆ ಬೆಂಕಿ ಹಚ್ಚಿ ಎರಡು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಲವಾರು ಪೂಜಾಸ್ಥಳಗಳಿಗೆ ಹಾನಿಯನ್ನುಂಟು ಮಾಡಲಾಗಿತ್ತು.

 ಶನಿವಾರ ಸಂಜೆ ಮಧ್ಯ ಬ್ರಹ್ಮನ್‌ಬಾರಿ ಜಿಲ್ಲೆಯ ನಾಸಿರ್‌ನಗರದಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳು ಹಿಂದುಗಳ ಕನಿಷ್ಠ ಆರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇಸ್ಲಾಂ ಧರ್ಮವನ್ನು ಅವಮಾನಿಸಿದ್ದ ಫೇಸಬುಕ್ ಪೋಸ್ಟ್‌ನ ಹಿನ್ನೆಲೆಯಲ್ಲಿ ಅ.30ರಂದು ಈ ಪ್ರದೇಶದಲ್ಲಿಯ ಕನಿಷ್ಠ 15 ದೇವಸ್ಥಾನಗಳು ಮತ್ತು 20ಕ್ಕೂ ಅಧಿಕ ಮನೆಗಳ ಮೇಲೆ ದಾಳಿಗಳು ನಡೆದಿದ್ದವು. ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ ಪೊಲೀಸರು ದಾಳಿಗಳಲ್ಲಿ ಭಾಗಿಯಾಗಿದ್ದ 33 ಆರೋಪಿಗಳನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿಯೂ ಭಾರತವು ಅಲ್ಪಸಂಖ್ಯಾತರ ಸುರಕ್ಷತೆಯ ವಿಷಯವನ್ನು ಬಾಂಗ್ಲಾದೇಶ ಸರಕಾರದೊಂದಿಗ ಕೈಗೆತ್ತಿಕೊಂಡಿತ್ತು.

 ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಭೂಮಿಯನ್ನು ಕಬಳಿಸುವ ಉದ್ದೇಶದಿಂದ ಹಲವಾರು ಹಿಂದು ದೇವಸ್ಥಾನಗಳ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News