ಸರಕಾರ ಮೀನುಗಾರಿಕೆ ಮಾರ್ಗದರ್ಶಿಯನ್ನು ಅನುಷ್ಠಾನ ಮಾಡಲಿ: ಡಾ.ಜಾನ್ ಕುರಿಯನ್
ಉಡುಪಿ, ನ.6: ರೋಮ್‌ನಲ್ಲಿ 2014ರಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ವ್ಯವಸಾಯ ಸಂಸ್ಥೆಯ ಅಧಿವೇಶನದಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಕೈಗೊಂಡ ಪ್ರಮುಖ ಆರು ಅಂಶಗಳ ಮಾರ್ಗದರ್ಶಿಕೆ ಯನ್ನು ಅನುಷ್ಠಾನಗೊಳಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮೀನುಗಾರರಿಗೆ ಬೆಂಬಲಿತವಾಗಿರುವ ಅಂತಾರಾಷ್ಟ್ರೀಯ ಒಕ್ಕೂಟ(ಎಸಿ ಎಸ್‌ಎಫ್) ಚೆನ್ನೈನ ನಿರ್ದೇಶಕ ಡಾ.ಜಾನ್ ಕುರಿಯನ್ ಹೇಳಿದ್ದಾರೆ.
ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಉಡುಪಿ ಜಿಲ್ಲೆ ಮೀನುಗಾರರಿಗೆ ಬೆಂಬಲಿತವಾಗಿರುವ ಅಂತಾರಾಷ್ಟ್ರೀಯ ಒಕ್ಕೂಟ(ಎಸಿಎಸ್ ಎಫ್) ಇದರ ಸಹಯೋಗದೊಂದಿಗೆ ರವಿವಾರ ಮಲ್ಪೆ ಮೀನುಗಾರ ವ್ಯಾಪಾರಸ್ಥರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಮೀನುಗಾರಿಕಾ ಸುಸ್ಥಿರತೆಗಾಗಿ ಸ್ವಯಂ ನಿರ್ಧರಿತ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನ ಕುರಿತ ಸಾಮರ್ಥ್ಯ ವೃದ್ಧಿಯ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮೀನುಗಾರರಿಗೆ ಅವಕಾಶ, ಸಮುದ್ರದಲ್ಲಿರುವ ಸಂಪನ್ಮೂಲಗಳ ನಿರ್ವ ಹಣೆ ಮತ್ತು ಸಂರಕ್ಷಣೆ, ವಸತಿ, ಶಿಕ್ಷಣ, ಆರೋಗ್ಯ ಸೇರಿದಂತೆ ಮೀನುಗಾರರ ಸಾಮಾಜಿಕ ಅಭಿವೃದ್ಧಿ, ಮೀನು ಹಿಡಿದ ನಂತರದ ಪ್ರಕ್ರಿಯೆಗಳು, ಮೀನುಗಾರಿಕೆಯಲ್ಲಿ ಲಿಂಗ ಸಮಾನತೆ, ಪ್ರಾಕೃತಿಕ ವಿಕೋಪದ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಅವಿಭಜಿತ ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ಮೀನು ಗಾರಿಕಾ ಕ್ಷೇತ್ರವು ಕೇಂದ್ರ ಸರಕಾರದ ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ. ಮೀನುಗಾರಿಕೆ ಸಂಬಂಧಿಸಿದಂತೆ ಪ್ರಸ್ತುತ ಅನೇಕ ಸಮಸ್ಯೆಗಳಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇಡೀ ದೇಶದಲ್ಲಿ ಏಕ ನೀತಿ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಐಸಿಎಸ್‌ಎಫ್‌ನ ವೇಣುಗೋಪಾಲ್ ಹಾಗೂ ವಿಜ್ಞಾನಿ ಡಾ.ರಾಮಚಂದ್ರ ಭಟ್, ಮಲ್ಪೆ ಮೀನುಗಾರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲಿಯಾನ್, ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಕಿದಿಯೂರು, ಮೀನುಗಾರಿಕಾ ಇಲಾಖೆಯ ಅಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ವಾಸುದೇವ ಬೋಳೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಕೆ.ಟಿ.ತಾಂಡೇಲ್ ವಂದಿಸಿ ದರು. ಐಕಳ ಪೊಂಪೈ ಕಾಲೇಜಿನ ಡಾ.ಎಸ್.ಗುಣಕರ್ ಕಾರ್ಯಕ್ರಮ ನಿರೂಪಿಸಿದರು.