ಬಹುಮುಖಿ ಅಧ್ಯಯನದಿಂದ ವೃತ್ತಿ ಯಶಸ್ವಿ: ನ್ಯಾ.ವೆಂಕಟಾಚಲಯ್ಯ

Update: 2016-11-06 12:08 GMT

ಉಡುಪಿ, ನ.6: ಬಹುಮುಖಿ ಮತ್ತು ನಿರಂತರ ಅಧ್ಯಯನದಿಂದ ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ನಿರಂತರ ಮತ್ತು ಮಹತ್ತರ ಬದಲಾವಣೆಗಳೊಂದಿಗೆ ಪದವೀಧರರು ಸಾಗಬೇಕು ಎಂದು ಪದ್ಮವಿಭೂಷಣ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ತೃತೀಯ ಬ್ಯಾಚ್‌ನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ, ಉಡುಪಿ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಾಣಿಕ್ಯದ ಮಹತ್ವ ಬಂಗಾರದ ಚೌಕಟ್ಟಿನಿಂದಾಗಿ ವಿಶೇಷ ಅಭಿವ್ಯಕ್ತಿಗೊಳ್ಳುವಂತೆ ಒಳ್ಳೆಯ ವಿದ್ಯೆಗೆ ಉತ್ತಮ ನಡತೆ ಮೆರಗು ಕೊಡುತ್ತದೆ ಎಂದರು.

ಬೆಂಗಳೂರಿನ ಸಿಎ ಟೆಕ್ನಾಲಜೀಸ್ ಸಂಸ್ಥೆಯ ಉಪಾಧ್ಯಕ್ಷ ಅನಿಲ್ ನಾಗೇಂದ್ರ ಮಾತನಾಡಿದರು. ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಪ್ರಮಾಣ ವಚನವನ್ನು ಬೋಧಿಸಿದರು. ಸೋದೆ ವಾದಿರಾಜ ಮಠ ಶಿಕ್ಷಣ ಟ್ರಸ್ಟ್‌ನ ಉಪಾಧ್ಯಕ್ಷ ಪಾಡಿಗಾರು ಶ್ರೀನಿವಾಸ ತಂತ್ರಿ, ಸದಸ್ಯ ಎಚ್.ವಿ. ಗೌತಮ ಉಪಸ್ಥಿತರಿದ್ದರು.

ಇದೇ ಸಂದಭರ್ದಲ್ಲಿ ತೃತೀಯ ಬ್ಯಾಚ್‌ನ ಎಲ್ಲ ವಿಭಾಗಗಳ ಅಗ್ರಸ್ಥಾನಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಂಟು ಉಪನ್ಯಾಸಕರನ್ನು ಮತ್ತು ರಾಜ್ಯ ಮಟ್ಟದ ಐಎಸ್‌ಟಿಇ ಪ್ರಶಸ್ತಿ ಪಡೆದ ವಿದ್ಯಾರ್ಥಿ ಭುವನಮಿತ್ರ ಅವರನ್ನು ಅಭಿನಂದಿಸಲಾಯಿತು. ಟ್ರಸ್ಟ್‌ನ ಕಾರ್ಯದರ್ಶಿ ರತ್ನಕುಮಾರ್ ಸ್ವಾಗತಿಸಿದರು. ಆದಿತ್ಯ ಕುಡ್ವ ವಂದಿಸಿದರು. ವೇಣುಗೋಪಾಲ್ ರಾವ್ ಮತ್ತು ರಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News