ಜೆಎನ್‌ಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಗೃಹ ಸಚಿವಾಲಯದ ವರದಿ ಕೇಳಲಿರುವ ರಾಷ್ಟ್ರಪತಿ
ಹೊಸದಿಲ್ಲಿ, ನ.6: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಕಳೆದ 22 ದಿನಗಳಿಂದ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕೇಂದ್ರ ಗೃಹ ಸಚಿವಾಲಯ ಮತ್ತು ಜೆಎನ್‌ಯು ಆಡಳಿತ ಸಮಿತಿಗೆ ಆದೇಶ ನೀಡಲಿದ್ದಾರೆ.
ದಿಲ್ಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ರಾಷ್ಟ್ರಪತಿ ಪ್ಣವ ಮುಖರ್ಜಿ ಅವರನ್ನು ಭೇಟಿಯಾಗಿ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಮಂತ್ರಿ ಕೇಜ್ರಿವಾಲ್ ಅವರು ದಿಲ್ಲಿ ಪೊಲೀಸರು ರಾಜಕೀಯ ಒತ್ತಡದಿಂದಾಗಿ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ವಿದ್ಯಾರ್ಥಿ ನಾಪತ್ತೆ ಪ್ರಕರಣದ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ಕೇಂದ್ರ ಗೃಹ ಸಚಿವಾಲಯ ಮತ್ತು ಜೆಎನ್‌ಯು ಆಡಳಿತ ಸಮಿತಿಯಿಂದ ವರದಿ ತರಿಸುವ ಭರವಸೆ ನೀಡಿದ್ದಾರೆ ಎಂದು ಮುಖ್ಯ ಮಂತ್ರಿ ಕೇಜ್ರವಾಲ್ ಮಾಹಿತಿ ನೀಡಿದರು.