‘ಇನ್‌ಕ್ರೆಡಿಬಲ್ ಇಂಡಿಯಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ರಾಯಭಾರಿ
ಹೊಸದಿಲ್ಲಿ,ನ.6: ತನ್ನ ‘ಇನ್‌ಕ್ರೆಡಿಬಲ್ ಇಂಡಿಯಾ’ ಅಭಿಯಾನಕ್ಕೆ ಅಮಿತಾಭ್ ಬಚ್ಚನ್ ಸೇರಿದಂತೆ ಯಾರಾದರೂ ಬಾಲಿವುಡ್ ತಾರೆಯರಿಗೆ ಗಾಳ ಹಾಕುವ ತನ್ನ ಯೋಜನೆಯನ್ನು ಕೈಬಿಡಲು ಅಂತಿಮವಾಗಿ ನಿರ್ಧರಿಸಿರುವ ಪ್ರವಾಸೋದ್ಯಮ ಸಚಿವಾಲಯವು ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನೇ ಬಳಸಿಕೊಳ್ಳಲು ಸಜ್ಜಾಗಿದೆ. ಈ ವರ್ಷದ ಆರಂಭದಲ್ಲಿ ಅಸಹಿಷ್ಣುತೆ ಕುರಿತ ತನ್ನ ಹೇಳಿಕೆಯಿಂದಾಗಿ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಆಮಿರ್ ಖಾನ್ ಅವರ ನಿರ್ಗಮನದ ಬಳಿಕ ‘ಇನ್‌ಕ್ರೆಡಿಬಲ್ ಇಂಡಿಯಾ ’ ಅಭಿಯಾನದ ರಾಯಭಾರಿಯ ಸ್ಥಾನ ಖಾಲಿಯಾಗಿಯೇ ಉಳಿದುಕೊಂಡಿದೆ.
ವಿದೇಶಿ ಪ್ರವಾಸಿಗಳನ್ನು ಆಕರ್ಷಿಸುವ ಉದ್ದೇಶದ ಈ ಅಭಿಯಾನದಲ್ಲಿ ಯಾವುದೇ ಬಾಲಿವುಡ್ ನಟರನ್ನು ತೊಡಗಿಸಿಕೊಳ್ಳುವುದಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿಯವರು ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪ್ರವಾಸೋದ್ಯಮ ಕುರಿತು ಮಾತನಾಡಿರುವ ಸಂದರ್ಭಗಳ ವೀಡಿಯೊ ಫೂಟೇಜ್‌ಗಳನ್ನು ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ದೇಶದಲ್ಲಿಯ ವಿವಿಧ ಸ್ಥಳಗಳ ವಿಶಿಷ್ಟತೆ ಮತ್ತು ವೈವಿಧ್ಯಗಳ ಕುರಿತು ಮೋದಿಯವರು ಮಾತನಾಡಿರುವ ಬೇರೆಬೇರೆ ಅವಧಿಗಳ ಎರಡು ಮಾದರಿಯ ವೀಡಿಯೊಗಳನ್ನು ವೀಡಿಯೊ ಮತ್ತು ಆಡಿಯೊ ಪ್ರಚಾರಗಳಲ್ಲಿ ಬಳಸಿಕೊಳ್ಳಲು ಸಚಿವಾಲಯವು ಉದ್ದೇಶಿಸಿದೆ. ಪ್ರಸಕ್ತ ಸಚಿವಾಲಯವು ವೀಡಿಯೋ ಫೂಟೇಜ್‌ಗಳ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ಅಧಿಕಾರಿ ತಿಳಿಸಿದರು. ಭಾರತದಲ್ಲಿ ಪ್ರವಾಸಿ ಋತು ನವಂಬರ್ ಅಂತ್ಯದಲ್ಲಿ ಆರಂಭಗೊಳ್ಳುವುದರಿಂದ ಅಭಿಯಾನದ ವಿಷಯ ಮುಂದಿನ 40-45 ದಿನಗಳಲ್ಲಿ ಸಿದ್ಧಗೊಳ್ಳಲಿದೆ ಎಂದರು.
ಅಭಿಯಾನವನ್ನು ನಡೆಸಲು ಏಜೆನ್ಸಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದರು.