ದೇವಾಲಯದ ಬಳಿ ದನದ ರುಂಡ, ಎಲುಬು ಪತ್ತೆ: ದೂರು
ಬೆಳ್ತಂಗಡಿ, ನ.6: ಬೆಳ್ತಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯ ಇಂದಬೆಟ್ಟು ಗ್ರಾಮದ ಬಂಗಾಡಿಯ ದೇವಾಲಯವೊಂದರ ಬಳಿ ಹಾಗೂ ಪಿಚಕಾರು ಎರ್ಮಾಳ ರಸ್ತೆಯಲ್ಲಿ ದನದ ತಲೆ ಹಾಗೂ ಎಲುಬುಗಳನ್ನು ಎಸೆದಿರುವ ಪ್ರಕರಣ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇಲ್ಲಿನ ಲಿಂಗತ್ಯಾರು ಶ್ರೀ ವೀರಭದ್ರ ಭದ್ರಕಾಳಿ ದೇವಸ್ಥಾನದ ಪರಿಸರದಲ್ಲಿ ಹಾಗೂ ಪಿಚಲಾರು-ಎರ್ಮಾಳು ಹೋಗುವ ರಸ್ತೆಯಲ್ಲಿ ದನದ ಕಾಲುಗಳು, ತಲೆ, ಮಾಂಸಗಳನ್ನು ಬಿಸಾಡಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಈ ಪರಿಸರದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡುಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದೇವಸ್ಥಾನದ ಪರಿಸರದಲ್ಲಿ ಇಂತಹ ಕೃತ್ಯವನ್ನು ಎಸಗಿ ಗಲಭೆಯನ್ನು ಸೃಷ್ಠಿಸುವ ಕೆಲಸವನ್ನು ಯಾರೋ ಕಿಡಿಗೇಡಿ ಮಾಡುತ್ತಿದ್ದಾರೆ. ಇದಕ್ಕೆ ಆಸ್ಪದ ಕೊಡದೆ ಇಂತಹ ಕೃತ್ಯವನ್ನು ಎಸಗಿದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಶನಿವಾರ ರಾತ್ರಿ ಈ ಕೃತ್ಯವನ್ನು ಎಸಗಿರಬೇಕೆಂದು ಅಂದಾಜಿಲಾಗಿದೆ. ದೇವಸ್ಥಾನದ ಬಳಿ ಇರುವ ನವೀನ್ ಎಂಬವರ ಅಂಗಡಿ ಪಕ್ಕದಲ್ಲೂ ಎಸೆಯಲಾಗಿತ್ತು. ಬೆಳಗ್ಗೆ ದಸದ ಮಾಂಸ ಎಸೆಯಲಾಗಿದೆ ಎಂಬ ಸುದ್ದಿ ತಿಳಿದ ಸ್ಥಳೀಯರು ದೇವಸ್ಥಾನದ ಬಳಿ ಜಮಾಯಿಸಿದ್ದಾರೆ. ಮಾಹಿತಿ ತಿಳಿದ ಬೆಳ್ತಂಗಡಿ ಎಸ್ಸೈ ರವಿ ಹಾಗೂ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಎಸ್ಪಿಯವರ ಗಮನಕ್ಕೂ ತರಲಾಗಿದೆ. ಸಾರ್ವಜನಿಕರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.