ಎನ್ ಡಿಟಿವಿ ಮೇಲೆ ನಿರ್ಬಂಧದ ಮಾತನಾಡಿದ ಸುಭಾಷ್ ಚಂದ್ರ
ಹೊಸದಿಲ್ಲಿ, ನ. 6 : ಎನ್ ಡಿಟಿವಿ ಇಂಡಿಯಾ ಸುದ್ದಿ ವಾಹಿನಿಯ ಮೇಲೆ ಕೇಂದ್ರ ಸರಕಾರ ಹಾಕಿರುವ ಒಂದು ದಿನದ ನಿರ್ಬಂಧಕ್ಕೆ ಸರ್ವತ್ರ ಆಕ್ರೋಶ, ಅಸಮಾಧಾನ ವ್ಯಕ್ತವಾಗಿರುವ ನಡುವೆಯೇ ಇನ್ನೊಂದು ಮಾಧ್ಯಮ ಸಂಸ್ಥೆ ಝೀ ಮೀಡಿಯಾ ಅಧ್ಯಕ್ಷ ಹಾಗು ರಾಜ್ಯಸಭಾ ಸದಸ್ಯ ಡಾ. ಸುಭಾಷ್ ಚಂದ್ರ ಅವರು ತದ್ವಿರುದ್ಧ ನಿಲುವು ಪ್ರಕಟಿಸಿದ್ದಾರೆ. ಎನ್ ಡಿಟಿವಿ ಮೇಲೆ ಹಾಕಿರುವ ನಿರ್ಬಂಧವನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸುಭಾಷ್ ಚಂದ್ರ ಅವರು " ಎನ್ ಡಿಟಿವಿ ಮೇಲೆ ಹಾಕಿರುವ ಒಂದು ದಿನದ ನಿರ್ಬಂಧ ಅನ್ಯಾಯವಾಗಿದೆ. ಏಕೆಂದರೆ ಇದು ಕಡಿಮೆ ಶಿಕ್ಷೆಯಾಗಿದೆ. ದೇಶದ ಸುರಕ್ಷತೆಯೊಂದಿಗೆ ಚೆಲ್ಲಾಟವಾಡಿದ ಈ ಚಾನಲ್ ಗೆ ಆಜೀವ ನಿರ್ಬಂಧ ಹಾಕಬೇಕಿತ್ತು. ನನ್ನ ಅಂದಾಜಿನ ಪ್ರಕಾರ , ಎನ್ ಡಿಟಿವಿ ನ್ಯಾಯಾಲಯಕ್ಕೆ ಹೋದರೂ ಅದಕ್ಕೇ ಛೀಮಾರಿ ಬೀಳುತ್ತಿತ್ತು " ಎಂದು ಹೇಳಿದ್ದಾರೆ.
ಯುಪಿಎ ಅವಧಿಯಲ್ಲಿ ಝೀ ಚಾನಲ್ ಮೇಲೆ ನಿರ್ಬಂಧ ಹಾಕುವ ಮಾತು ಬಂದಾಗ "ಎನ್ ಡಿಟಿವಿ ಮತ್ತು ತಥಾಕಥಿತ ಬುದ್ಧಿಜೀವಿಗಳು ಮಾತನಾಡಲಿಲ್ಲ. ಸಂಪಾದಕರ ಮಂಡಳಿಯೂ ಮೌನ ವಹಿಸಿತ್ತು. ಈಗ ಎಲ್ಲರೂ ತುರ್ತು ಪರಿಸ್ಥಿತಿ ಬಂದಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ದೇಶದ ಸುರಕ್ಷತೆಗೆ ಏನೂ ಮಹತ್ವವಿಲ್ಲವೇ " ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.