ಪಾಕ್‌ನಿಂದ ಮತ್ತೆ ಕದನವಿರಾಮ ಉಲ್ಲಂಘನೆ ಇಬ್ಬರು ಯೋಧರ ಸಾವು,ಮೂವರಿಗೆ ಗಾಯ
ಶ್ರೀನಗರ,ನ.6: ಪೂಂಛ್ ಜಿಲ್ಲೆಯ ಪೂಂಛ್ ಮತ್ತು ಕೃಷ್ಣಾಘಾಟಿ ವಿಭಾಗಗಳಲ್ಲಿನ ನಿಯಂತ್ರಣ ರೇಖೆಯಲ್ಲಿ ರವಿವಾರ ಉಗ್ರರನ್ನು ಒಳನುಸುಳಿಸುವ ಎರಡು ಪ್ರಯತ್ನಗಳಿಗೆ ಅನುಕೂಲ ಕಲ್ಪಿಸಲು ಪಾಕಿಸ್ತಾನಿ ಸೇನೆಯು ಗುಂಡಿನ ದಾಳಿಗಳನ್ನು ನಡೆಸಿದ್ದು, ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಯೋಧರು ಮತ್ತು ಓರ್ವ ಸ್ಥಳೀಯ ಮಹಿಳೆ ಗಾಯಗೊಂಡಿದ್ದಾರೆ.
ನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸುವ ಜೊತೆಗೆ ಭಾರತೀಯ ಯೋಧರು ಪ್ರತಿದಾಳಿ ನಡೆಸುವ ಮೂಲಕ ಗಡಿಯಾಚೆಯ ಹಲವಾರು ಪಾಕಿಸ್ತಾನಿ ಸೇನಾನೆಲೆಗಳಿಗೆ ಭಾರೀ ಹಾನಿಯನ್ನುಂಟು ಮಾಡಿದ್ದಾರೆ. ಕೃಷ್ಣಾಘಾಟಿ ವಿಭಾಗದಲ್ಲಿ ಇಂದು ನಸುಕಿನಲ್ಲಿ ಎರಡು ನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸುವ ಕಾರ್ಯಾಚರಣೆ ಸಂದರ್ಭ ಗಡಿಯಾಚೆಯಿಂದ ನಡೆದ ಗುಂಡಿನ ದಾಳಿಯಿಂದ ಯೋಧ ಗುರುಸೇವಕ್ ಸಿಂಗ್(23) ಮೃತಪಟ್ಟಿದ್ದರೆ, ಸ್ಥಳೀಯ ಮಹಿಳೆ ಗಾಯಗೊಂಡಿದ್ದಾಳೆ. ಪೂಂಛ್ ವಿಭಾಗದಲ್ಲಿ ಇನ್ನೋರ್ವ ಯೋಧ ಸಾವನ್ನಪ್ಪಿದ್ದರೆ, ಇತರ ಇಬ್ಬರು ಗಾಯಗೊಂಡಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೋರ್ವರು ತಿಳಿಸಿದರು. 22 ಸಿಖ್ ರೆಜಿಮೆಂಟಿಗೆ ಸೇರಿದ್ದ ಸಿಂಗ್ ಪಂಜಾನಿನ ತರನ್ ತರನ್ ಪ್ರದೇಶದ ಲಾಲಪುರದ ವಾರಾನಾ ಗ್ರಾಮ ನಿವಾಸಿ ಬಲ್ವಿಂದರ್ ಸಿಂಗ್ ಅವರ ಪುತ್ರರಾಗಿದ್ದಾರೆ.
ಪೂಂಛ್ ನಿವಾಸಿ ಸಲೀಮಾ ಅಖ್ತರ್(28) ಪಾಕ್ ದಾಳಿಯಲ್ಲಿ ಗಾಯಗೊಂಡಿದ್ದು, ಅವರನ್ನು ಪೂಂಛ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹಸ್ಥಿತಿ ಸ್ಥಿರವಾಗಿದೆ.
ಪೂಂಛ್ ವಿಭಾಗದಲ್ಲಿ ಮೃತಪಟ್ಟ ಯೋಧನ ಮತ್ತು ಗಾಯಾಳುಗಳ ಹೆಸರುಗಳನ್ನು ಅವರ ಕುಟುಂಬಗಳಿಗೆ ಮಾಹಿತಿ ನೀಡಿದ ಬಳಿಕ ಬಹಿರಂಗಗೊಳಿಸಲಾಗುವುದು ಎಂದ ಅಧಿಕಾರಿ, ಪೂಂಛ್ ವಿಭಾಗದಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮುಂದುವರಿದಿದೆ. ನಮ್ಮವರು ಸೂಕ್ತ ಉತ್ತರ ನೀಡುತ್ತಿದ್ದಾರೆ. ಪಾಕಿಸ್ತಾನಿ ಸೇನಾ ನೆಲೆಗಳಿಗೆ ಭಾರೀ ಹಾನಿಯನ್ನುಂಟು ಮಾಡಲಾಗಿದೆ ಎಂದು ತಿಳಿಸಿದರು.
ಕನಿಷ್ಠ ನಾಲ್ಕು ಕಡೆಗಳಲ್ಲಿ ಸೇನಾನೆಲೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್‌ನಿಂದ ಶೆಲ್‌ಗಳು ಮತ್ತು ಗುಂಡಿನ ದಾಳಿಗಳುನಡೆದಿವೆ. ಎರಡು ದಿನಗಳ ವಿರಾಮದ ಬಳಿಕ ಪಾಕಿಸ್ತಾನ ಸೈನಿಕರಿಂದ ಈ ಕದನ ವಿರಾಮ ಉಲ್ಲಂಘನೆ ನಡೆದಿದೆ. ಸೆ.28ರ ರಾತ್ರಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿಗಳನ್ನು ನಡೆಸಿದ ಬಳಿಕ ಪಾಕಿಸ್ತಾನಿ ಸೈನಿಕರು ನೂರಕ್ಕೂ ಅಧಿಕ ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದ್ದಾರೆ.