ಕೇರಳದ ಜಿಲ್ಲಾ ನ್ಯಾಯಿಕ ದಂಡಾಧಿಕಾರಿಯಿಂದ ಸುಳ್ಯದಲ್ಲಿ ದಾಂಧಲೆ!

Update: 2016-11-06 17:17 GMT

ಸುಳ್ಯ, ನ.6: ಕೇರಳದ ಜಿಲ್ಲಾ ನ್ಯಾಯಿಕ ದಂಡಾಧಿಕಾರಿಯೊಬ್ಬರು ಸುಳ್ಯದಲ್ಲಿ ದಾಂಧಲೆ ನಡೆಸಿ ಎಸ್ಸೈ ಮೇಲೂ ಹಲ್ಲೆಗೈದ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಸರಗೋಡಿನಲ್ಲಿ ಜಿಲ್ಲಾ ನ್ಯಾಯಿಕ ದಂಡಾಧಿಕಾರಿಯಾಗಿರುವ ತ್ರಿಶ್ಶೂರ್‌ನ ಉಣ್ಣಿಕೃಷ್ಣನ್ ಎಂಬವರು ಸುಬ್ರಹ್ಮಣ್ಯಕ್ಕೆ ತೆರಳಿದ್ದು, ಅಲ್ಲಿಂದ ಬಸ್ ಮೂಲಕ ಸಂಜೆ ವೇಳೆ ಸುಳ್ಯಕ್ಕೆ ಆಗಮಿಸಿದ್ದರು. ಬಸ್ ನಿಲ್ದಾಣದಲ್ಲಿ ಇಳಿದ ಅವರು ಸಂಚರಿಸುತ್ತಿದ್ದ ರಿಕ್ಷಾವೊಂದನ್ನು ನಿಲ್ಲಿಸಿ ಚಾಲಕನಿಗೆ ಇಂಗ್ಲೀಷ್‌ನಲ್ಲಿ ಏನೋ ಹೇಳಿದರು. ಆದರೆ ಚಾಲಕ ಅಬೂಬಕರ್‌ಗೆ ಅದು ಅರ್ಥವಾಗಿಲ್ಲ. ಈ ಸಂದರ್ಭ ಅವರು ಮಲೆಯಾಳಂನಲ್ಲಿ ವಿಷಯ ಏನು ಎಂದು ಕೇಳಿದ್ದರು. ಆದರೆ ಉಣ್ಣಿಕೃಷ್ಣನ್ ಮತ್ತೆ ಇಂಗ್ಲೀಷ್‌ನಲ್ಲೇ ಮಾತನಾಡಿದ್ದು, ಚಾಲಕ ರಿಕ್ಷಾ ಚಲಾಯಿಸುತ್ತಿದ್ದಂತೆ ಹಲ್ಲೆಗೆ ಯತ್ನಿಸಿದರು ಎನ್ನಲಾಗಿದೆ.

ಇದರಿಂದ ಭಯಗೊಂಡ ಚಾಲಕ ರಿಕ್ಷಾವನ್ನು ನೇರವಾಗಿ ಪೊಲೀಸ್ ಠಾಣೆಗೆ ಕೊಂಡೊಯ್ದರು. ಅಲ್ಲೂ ಚಾಲಕನ ಮೇಲೆ ಉಣ್ಣಿಕೃಷ್ಣನ್ ಹಲ್ಲೆ ಮಾಡಿದ್ದರೆನ್ನಲಾಗಿದೆ. ಠಾಣೆಯ ಎದುರಿನಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಸುಚಿನ್ ಹಾಗೂ ಗೃಹರಕ್ಷಕ ಅಬ್ದುಲ್ ಗಫೂರ್ ರಕ್ಷಣೆಗಾಗಿ ಆಗಮಿಸಿದಾಗ ಅವರ ಮೇಲೂ ಉಣ್ಣಿಕೃಷ್ಣನ್ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನ್‌ಸ್ಟೇಬಲ್ ಸುಚಿನ್ ಉಣ್ಣಿಕೃಷ್ಣನ್‌ರನ್ನು ಠಾಣೆಯ ಒಳಗೆ ಕರೆದೊಯ್ದ್ದಿಗ ಅಲ್ಲಿದ್ದ ಎಎಸ್ಸೈ ಪುರುಷೋತ್ತಮ ಮತ್ತು ಎಸ್ಸೈ ಚಂದ್ರಶೇಖರ್ ಅವರ ಕಾಲರ್ ಹಿಡಿದರು ಎನ್ನಲಾಗಿದೆ. ವಿಚಾರಣೆ ವೇಳೆ ಹಲ್ಲೆ ನಡೆಸಿದವರು ಜಿಲ್ಲಾ ನ್ಯಾಯಿಕ ದಂಡಾಧಿಕಾರಿಯೆಂದು ತಿಳಿದ ಬಳಿಕ ಅವರನ್ನು ಪ್ರವಾಸಿ ಮಂದಿರಕ್ಕೆ ಕರೆದೊಯ್ದ ಪೊಲೀಸರು ಅಲ್ಲಿ ರಕ್ಷಣೆಗೆ ಪೊಲೀಸರನ್ನು ನೇಮಿಸಿದ್ದಾರೆ.

ಹಲ್ಲೆಗೊಳಗಾದ ಕಾನ್ಸ್‌ಟೇಬಲ್ ಸುಚಿನ್ ಹಾಗೂ ಗೃಹರಕ್ಷಕ ಅಬ್ದುಲ್ ಗಫೂರ್ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಜಿಲ್ಲಾ ನ್ಯಾಯಿಕ ದಂಡಾಧಿಕಾರಿ ಪಾನಮತ್ತರಾಗಿದ್ದರು ಎಂದು ರಿಕ್ಷಾ ಚಾಲಕ ಹಾಗೂ ಹಲ್ಲೆಗೊಳಗಾದ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News