×
Ad

ಯಕ್ಷಗಾನ ಕಲಾವಿದರಿಗೆ ಕಲಾರಂಗ ಪ್ರಶಸ್ತಿ ಪ್ರದಾನ

Update: 2016-11-06 20:54 IST

ಉಡುಪಿ, ನ.6: ಸುಳ್ಯ ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನಕ್ಕೆ ‘ಶ್ರೀವಿಶ್ವೇಶತೀರ್ಥ ಪ್ರಶಸ್ತಿ’ ಹಾಗೂ 16ಮಂದಿ ಯಕ್ಷಗಾನ ಕಲಾ ವಿದರುಗಳಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪ್ರದಾನ ಮಾಡಲಾಯಿತು.

ಕಲಾವಿದರುಗಳಾದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಬಾಲಕೃಷ್ಣ ನಾಯಕ್ ಬ್ರಹ್ಮಾವರ, ಲಕ್ಷ್ಮಣ್ ಕಾಂಚನ್ ಬಾರಕೂರು, ಮುಂಡ್ಕೂರು ಜಯರಾಮ ಶೆಟ್ಟಿ, ಬೊಕ್ಕಸ ಜಗನ್ನಾಥ ರಾವ್, ಸೀತಾರಾಮ ಕುಮಾರ್ ಕಟೀಲು, ವಿಷ್ಣು ಹೆಗಡೆ ಹಿರೇಮಕ್ಕಿ, ಹಡಿನಾಳ ಶ್ರೀಪಾದ ಹೆಗಡೆ, ಗುಂಡಿಬೈಲು ಸುಬ್ರಾಯ ಭಟ್, ಬೆಳ್ಳಾರೆ ವಿಶ್ವನಾಥ ರೈ, ಜಯಕುಮಾರ್ ಜೈನ್, ನಾಗಪ್ಪ ಹೊಳೆ ಮೊಗೆ, ಪದ್ಯಾಣ ಶಂಕರನಾರಾಯಣ ಭಟ್, ಜನಾರ್ದನ ಆಚಾರ್ ನೆಲ್ಲೂರು, ಕುರ್ನಾಡು ಶಿವಣ್ಣ ಆಚಾರ್ಯ, ಕೆಂಜಿಮನೆ ನಾಗು ಗೌಡ ಅವರಿಗೆ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರತಿಷ್ಠಾನದ ಪರವಾಗಿ ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ರಾಜಾರಾಮ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಯಕ್ಷಚೇತನ ಪ್ರಶಸ್ತಿಯನ್ನು ಕಲಾರಂಗದ ಹಿರಿಯ ಸದಸ್ಯ ಎಸ್.ವಿ.ಭಟ್ ಅವರಿಗೆ ಪ್ರದಾನ ಮಾಡಲಾಯಿತು. ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ‘ಕಲಾ ತರಂಗ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಕ್ಷಗಾನವು ಜಗತ್ತಿನ ಅತ್ಯಂತ ಸಮೃದ್ಧವಾದ ಕಲೆಯಾಗಿದೆ. ಈ ಕಲೆಯಲ್ಲಿ ತೊಡಗಿಸಿ ಕೊಂಡಿರುವ ಸಾಕಷ್ಟು ಮಂದಿ ಕಲಾವಿದರು ಕಷ್ಟದ ಬದುಕು ನಡೆಸುತ್ತಿದ್ದಾರೆ. ಅವರಿಗೆ ಸಹಾಯ ಮಾಡುವ ಕಾರ್ಯ ಮಾಡಬೇಕಾಗಿದೆ ಎಂದರು.

ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ತೀರ್ಥಹಳ್ಳಿ ಬಾಳೆಗಾರು ಮಠಾಧೀಶ ಶ್ರೀರಘುಭೂಷಣ ತೀರ್ಥ ಸ್ವಾಮೀಜಿ ಆಶೀರ್ವ ಚನ ನೀಡಿದರು. ಕಲಾ ವಿಮರ್ಶಕ ಎಸ್.ವಿ.ಉದಯ ಕುಮಾರ್ ಶೆಟ್ಟಿ ಸಂಸ್ಮರಣಾ ಭಾಷಣ ಮಾಡಿದರು. ಡಾ.ಚಂದ್ರಶೇಖರ್ ಶೆಟ್ಟಿ ಕಾಪು ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಗಂಗಾಧರ ರಾವ್ ವಂದಿಸಿದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುನ್ನ ‘ಸುಧನ್ವ ಮೋಕ್ಷ’ ಹಾಗೂ ನಂತರ ‘ರುಕ್ಮಾಂಗದ ಚರಿತ್ರೆ’ ಯಕ್ಷಗಾನ ಪ್ರದರ್ಶನ ನಡೆಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News