ಮಹಿಳೆಯನ್ನು ನಾಯಿಯಂತೆ ಸಂಕಲೆಯಲ್ಲಿ ಬಂಧಿಸಿಟ್ಟಿದ್ದ ವ್ಯಕ್ತಿಯ ಬಂಧನ

Update: 2016-11-06 16:28 GMT

ಮಯಾಮಿ (ಅಮೆರಿಕ), ನ. 6: ಅಮೆರಿಕದ ಸೌತ್ ಕ್ಯಾರಲೈನ ರಾಜ್ಯದಲ್ಲಿ ಮಹಿಳೆಯೊಬ್ಬರನ್ನು ‘ನಾಯಿಯಂತೆ ಸಂಕಲೆಯಲ್ಲಿ ಬಂಧಿಸಿಟ್ಟಿದ್ದ’’ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಏಳು ಮಂದಿಯನ್ನು ಕೊಂದಿರುವುದಾಗಿ ಬಂಧಿತನು ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಸ್ಥಳೀಯ ಶರೀಫ್ ಹೇಳಿದ್ದಾರೆ.

ಹದಿಮೂರು ವರ್ಷಗಳ ಕಾಲ ಪೊಲೀಸರ ನಿದ್ದೆಗೆಡಿಸಿದ್ದ ನಾಲ್ವರ ಕೊಲೆಯನ್ನು ಟಾಡ್ ಕ್ರಿಸ್ಟೋಫರ್ ಕೊಹ್ಲೆಪ್ ಮಾಡಿರುವುದಾಗಿ ಆರೋಪಿಸಿ ವಾರಂಟ್‌ಗಳನ್ನು ಹೊರಡಿಸಲಾಗಿದೆ ಎಂದು ಶನಿವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಪಾರ್ಟನ್‌ಬರ್ಗ್ ಕೌಂಟಿ ಶರೀಫ್ ಚಕ್ ರೈಟ್ ಹೇಳಿದರು.

ತಾನು ಹೊಂದಿರುವ ವಿಶಾಲ ಸ್ಥಳದಲ್ಲಿರುವ ಎರಡು ಸಮಾಧಿ ಸ್ಥಳಗಳನ್ನು ಆರೋಪಿಯು ತೋರಿಸಿದ್ದಾನೆ ಎಂದು ರೈಟ್ ಹೇಳಿದರು. ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ಒಂದು ದೇಹವನ್ನು ಇನ್ನೊಂದು ಸಮಾಧಿಯಿಂದ ಅಗೆದು ತೆಗೆಯಲಾಗಿತ್ತು.

45 ವರ್ಷದ ಆರೋಪಿ ಇತ್ತೀಚೆಗೆ ಕಾಲಾ ಬ್ರೌನ್ ಎಂಬ ಮಹಿಳೆಯನ್ನು ತನ್ನ ಜಾಗದಲ್ಲಿರುವ ಕಂಟೇನರ್ ಒಂದರಲ್ಲಿ ಕತ್ತು ಮತ್ತು ಕಾಲುಗಳಿಗೆ ಸಂಕಲೆ ಹಾಕಿ ಬಂಧಿಸಿಟ್ಟಿದ್ದನು. ಆಕೆಯ ಪತ್ತೆಗಾಗಿ ಶೋಧ ವಾರಂಟ್ ಹಿಡಿದುಕೊಂಡು ಕೊಹ್ಲೆಪ್‌ನ ಜಾಗಕ್ಕೆ ಬಂದಿದ್ದ ಪೊಲೀಸರಿಗೆ ಕಂಟೇನರ್‌ಗೆ ಬಡಿಯುತ್ತಿರುವ ಸದ್ದು ಕೇಳಿಸಿತ್ತು. ಆಗ ಹುಡುಕಾಡಿದ ಪೊಲೀಸರಿಗೆ ಸಂಕಲೆಯಿಂದ ಬಂಧಿಸಲ್ಪಟ್ಟಿದ್ದ ಮಹಿಳೆ ಕಾಣಿಸಿದರು.

ಸೌತ್ ಕ್ಯಾರಲೈನದ ರಾಜಧಾನಿ ಕೊಲಂಬಿಯದ ವುಡ್‌ರಫ್ ಪಟ್ಟಣದಲ್ಲಿ 95 ಎಕರೆ ಜಮೀನು ಹೊಂದಿರುವ ಕೊಹ್ಲೆಪ್ ರಿಯಲ್ ಎಸ್ಟೇಟ್ ಏಜಂಟ್ ಹಾಗೂ ಘೋಷಿತ ಲೈಂಗಿಕ ಅಪರಾಧಿ.

ತಾನು ಎರಡು ತಿಂಗಳ ಕಾಲ ಕಂಟೇನರ್‌ನಲ್ಲಿದ್ದೆ ಎಂಬುದಾಗಿ ಮಹಿಳೆ ಹೇಳಿದ್ದಾರೆ. ಮಹಿಳೆ ಮತ್ತು ಆಕೆಯ ಗೆಳೆಯ ಚಾರ್ಲ್ಸ್ ಕಾರ್ವರ್ ಆಗಸ್ಟ್ ತಿಂಗಳಿನಿಂದ ನಾಪತ್ತೆಯಾಗಿದ್ದರು.

ಚಾರ್ಲ್ಸ್‌ರನ್ನು ಆರೋಪಿಯು ಮಹಿಳೆಯ ಎದುರೇ ಗುಂಡು ಹಾರಿಸಿ ಕೊಂದಿದ್ದಾನೆ. ಶುಕ್ರವಾರ ಅಗೆದು ತೆಗೆಯಲಾದ ಮೃತದೇಹ ಆತನದ್ದೆ ಎಂದು ಶರೀಫ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News