×
Ad

ಮುಲ್ಕಿ ಜನಸಂಪರ್ಕ ಸಭೆಯಲ್ಲಿ ಶಾಸಕರಿಂದ ಅತಿರೇಕದ ವರ್ತನೆ: ಎಸ್‌ಡಿಪಿಐ ಆರೋಪ

Update: 2016-11-06 23:21 IST

ಮುಲ್ಕಿ, ನ.6: ಮುಲ್ಕಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜನಸಾಮಾನ್ಯನ ನೆಲೆಯಲ್ಲಿ ಭಾಗವಹಿಸಿದ್ದ ಎಸ್‌ಡಿಪಿಐ ಮುಲ್ಕಿ ನಗರ ಸಮಿತಿ ಅಧ್ಯಕ್ಷರಾದ ಶರೀಫ್ ಕೊಲ್ನಾಡ್ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ ಜವಾಬ್ದಾರಿಯುತವಾಗಿ ಉತ್ತರಿಸಬೇಕಾಗಿದ್ದ ಶಾಸಕ ಅಭಯಚಂದ್ರ ಜೈನ್, ಪ್ರಶ್ನಿಸಿದ ಶರೀಫ್‌ರನ್ನು ಅವಾಚ್ಯವಾಗಿ ಬೈದು ಹೊರ ನಡೆಯುವಂತೆ ಸೂಚಿಸಿದ್ದು ಖಂಡನೀಯ ಎಂದು ಎಸ್‌ಡಿಪಿಐ ಮುಲ್ಕಿ -ಮೂಡುಬಿದಿರೆ ಕ್ಷೇತ್ರ ಸಮಿತಿ ಅಧ್ಯಕ್ಷ ಎ.ಕೆ. ಅಶ್ರಫ್ ಹೇಳಿದ್ದಾರೆ.

ಜನ ಸಂಪರ್ಕ ಸಭೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಅಧಿಕಾರದ ವೈಫಲ್ಯವನ್ನು ಜನರ ಮುಂದೆ ತೆರೆದಿಟ್ಟಾಗ ಶಾಸಕರ ಎದುರಲ್ಲೇ ಪ್ರಶ್ನೆ ಕೇಳಿದ್ದ ಶರೀಫ್ ಕೊಲ್ನಾಡ್‌ರ ಮೇಲೆ ಹಲ್ಲೆಗೆ ಮುಂದಾಗಿರುವುದು ದಮನಿತರ ಪರ ಧ್ವನಿ ಎತ್ತುವವರ ಧ್ವನಿಯಡಗಿಸುವ ಪ್ರಯತ್ನವಾಗಿರುತ್ತದೆ. ಈ ವರ್ತನೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವ ಹಕ್ಕನ್ನು ನಿರಾಕರಿಸಿದಂತಾಗಿದೆ. ಇದಕ್ಕೂ ಮೊದಲು ಮುಲ್ಕಿಯಲ್ಲಿ ಆಟೋ ಚಾಲಕನ ಮೇಲೆ ಮತ್ತು ಪತ್ರಕರ್ತರೊಬ್ಬರ ಮೇಲೆ ಕೈ ಮಾಡಿ ವಿವಾದಕ್ಕೀಡಾಗಿದ್ದ ಜೈನ್ ಮತ್ತೊಮ್ಮೆ ತನ್ನ ಪಕ್ಷದವರನ್ನು ಛೂ ಬಿಟ್ಟು ಸಾಮಾನ್ಯ ವ್ಯಕ್ತಿಯೊಬ್ಬನ ಮೇಲೆ ಕೈ ಮಾಡಿಸಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಜನ ಸಾಮಾನ್ಯರ ಸಮಸ್ಯೆಯನ್ನು ಕೇಳಲು ತಾಳ್ಮೆಯೇ ಇಲ್ಲದವರು ಜನಪ್ರತಿನಿಧಿ ಸ್ಥಾನಕ್ಕೇರುವ ಮೊದಲು ಆಲೋಚಿಸಬೇಕು.ಮಾನ್ಯ ಶಾಸಕರು ತನ್ನ ಅತಿರೇಕದ ವರ್ತನೆಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು ಎಂದು ಎ.ಕೆ. ಅಶ್ರಫ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News