ಬೆಳ್ತಂಗಡಿ: ಸಂಸ್ಕೃತಿ ಭವನ ಉದ್ಘಾಟನೆ
ಬೆಳ್ತಂಗಡಿ, ನ.6: ಬೆಂಗಳೂರು ಎಸ್-ವ್ಯಾಸ ವಿಶ್ವವಿದ್ಯಾನಿಲಯದ ಪ್ರಶಾಂತಿಕುಟೀರದಲ್ಲಿ ಸಂಸ್ಕೃತಿ ಭವನ ಉದ್ಘಾಟನೆ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಕರ್ಮಯೋಗ ಪೀಠಾರೋಹಣ ಕಾರ್ಯಕ್ರಮ ನಡೆಯಿತು.
ಯೋಗ ಶಿಕ್ಷಣ, ಚಿಕಿತ್ಸೆ ಮತ್ತು ಸಂಶೋಧನೆಗಳನ್ನು ಮುಖವಾಣಿಯಾಗಿ ಸ್ವೀಕರಿಸಿ ಯೋಗಕ್ಕಾಗಿಯೇ ಮುಡಿಪಾಗಿರುವ ಎಸ್-ವ್ಯಾಸ ವಿಶ್ವವಿದ್ಯಾನಿಲಯವು ನಿರಂತರವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ಪ್ರಮುಖ ಯೋಗ ಸಂಸ್ಥೆಗಳಲ್ಲೊಂದು. 2002ರಲ್ಲಿ ವಿಶ್ವವಿದ್ಯಾನಿಲಯದ ಮಾನ್ಯತೆ ಹೊಂದಿದ ಈ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋದನೆಗಳ ಮೂಲಕ ಯೋಗದ ಮಹತ್ವವನ್ನು ತಿಳಿಸಿದೆ. ಇಲ್ಲಿನ ಪ್ರಶಾಂತಿ ಕುಟೀರದ ಸಂಸ್ಕೃತಿ ಭವನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ರಾಜಯೋಗದ ಅಧ್ಯಕ್ಷ ಡಾ.ಬಿನ್ನಿ ಸರೀನ್, ಉದ್ಯಮಿ ಸುರೇಶ್ ಬಗಾರಿಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಎಸ್.ವ್ಯಾಸ ವಿಶ್ವವಿದ್ಯಾನಿಲಯದಲ್ಲಿ ಯೋಗ ಆಧ್ಯಾತ್ಮ ವಿಭಾಗ, ಯೋಗ ಮತ್ತು ಜೀವವಿಜ್ಞಾನ ವಿಭಾಗ, ಯೋಗ ಮತ್ತು ಭೌತವಿಜ್ಞಾನ ವಿಭಾಗ, ಯೋಗ ಮತ್ತು ನಿರ್ವಹಣ ವಿಜ್ಞಾನ ವಿಭಾಗ ಹಾಗೂ ಯೋಗ ಮತ್ತು ಮಾನವಿಕ ವಿಜ್ಞಾನ ವಿಭಾಗಗಳಿವೆ. ಪ್ರತಿಯೊಂದರಲ್ಲಿ ಪೀಠಗಳನ್ನು ಪ್ರತಿಷ್ಠಾಪಿಸಿ ಅದರಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿಶ್ವವಿದ್ಯಾನಿಲಯದ ಪರಂಪರೆ. ಯೋಗಾಧ್ಯಾತ್ಮ ವಿಭಾಗದಲ್ಲಿ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಮತ್ತು ರಾಜಯೋಗಗಳೆಂಬ 4 ಪೀಠಗಳಲ್ಲಿ ಒಂದಾದ ಕರ್ಮಯೋಗಪೀಠವನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮುನ್ನಡೆಸುವ ವಿಶ್ವವಿದ್ಯಾನಿಲಯದ ಪದಾಧಿಕಾರಿಗಳ ಸಂಕಲ್ಪವನ್ನು ಅಂಗೀಕರಿಸಲಾಯಿತು.
ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ಕರ್ಮಯೋಗಪೀಠದ ಪರಿಚಯ ಮತ್ತು ಹಿನ್ನೆಲೆಯನ್ನು ವಿವರಿಸಿದರು. ಕರ್ಮಯೋಗ ಪೀಠಾಧಿಷ್ಠಾನವನ್ನು ಭಾರತೀಯ ಸಂಸ್ಕೃತಿಯ ಅನುಸಾರವಾಗಿ ಪುಷ್ಪವೃಷ್ಟಿಯೊಂದಿಗೆ, ಸುಮಂಗಲಿಯರ ಸುಮಧುರ ಸಂಗೀತದೊಂದಿಗೆ ಆರತಿಯ ಮೂಲಕ ನೆರೆವೇರಿಸಲಾಯಿತು.
ವೇದಿಕೆಯಲ್ಲಿ ಹೇಮಾವತಿ ವಿ ಹೆಗ್ಗಡೆ, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಕುಲಪತಿ ಪ್ರೊ.ರಾಮಚಂದ್ರ ಜಿ. ಭಟ್, ಉಪಕುಲಾಧಿಪತಿ ಪ್ರೊ. ಕೆ ಸುಬ್ರಹ್ಮಣ್ಯಂ, ಕುಲಸಚಿವ ಡಾಸಂಜೀಬ್ ಪಾತ್ರ ಉಪಸ್ಥಿತರಿದ್ದರು.