×
Ad

ಸಾಹಿತ್ಯಾಸಕ್ತಿಯಿಂದ ಭಾಷೆಯ ಬೆಳವಣಿಗೆ: ಕೃಷ್ಣಪ್ಪ

Update: 2016-11-06 23:54 IST

ಉಪ್ಪಿನಂಗಡಿ(ಬಿ.ಎಂ.ಇದಿನಬ್ಬ ವೇದಿಕೆ), ನ.6: ಪ್ರತಿಯೋರ್ವರೂ ಸಾಹಿತ್ಯ ಪ್ರೀತಿ ಬೆಳೆಸಿಕೊಳ್ಳುವುದು ಅತೀ ಮುಖ್ಯವಾಗಿದ್ದು, ಆಗ ಮಾತ್ರ ಭಾಷೆಯೊಂದರ ಬೆಳವಣಿಗೆ ಸಾಧ್ಯವಾಗುತ್ತದೆ. ಮಾತೃ ಭಾಷೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದಂತೆ ಬೇರ್ಯಾವ ಭಾಷೆಯಲ್ಲೂ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಮಾತೃ ಭಾಷೆಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದರೆ ಅದು ಸುಲಭವಾಗಿಯೂ, ಅರ್ಥಪೂರ್ಣವಾಗಿಯೂ ಇರಲಿದೆ ಎಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ತಿಳಿಸಿದರು.
   ಕಸಾಪ ಪುತ್ತೂರು ತಾಲೂಕು ಘಟಕದ ವತಿಯಿಂದ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಉಪ್ಪಿನಂಗಡಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಿದ್ದರು. ಪುಸ್ತಕ ಖರೀದಿಸುವ ಗುಣದೊಂದಿಗೆ ನಮ್ಮಲ್ಲಿ ಪುಸ್ತಕವನ್ನು ಪ್ರೀತಿಸುವ, ಓದುವ ಗುಣವೂ ಬೇಕು. ಆಗ ನಮ್ಮ ಜ್ಞಾನ ವೃದ್ಧಿಯೊಂದಿಗೆ ಭಾಷಾಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯವರು ಕನ್ನಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಅವರೆಂದಿಗೂ ಪ್ರತ್ಯೇಕತೆ ಬಯಸಿದವರಲ್ಲ. ಆದರೆ ಈಗ ಕೆಲವರಿಂದ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದ್ದು, ಇದು ಇಲ್ಲಿನ ಹಿರಿಯರಿಗೆ ಮಾಡಿದ ಅವಮಾನವಾಗಿದೆ. ಯಾವುದೇ ಕಾರಣಕ್ಕೂ ಕನ್ನಡ ತಾಯಿಯಿಂದ ಕವಲೊಡೆಯುವ ಮಾತೇ ಇಲ್ಲ ಎಂದು ತಿಳಿಸಿದರು. ಏಕರೂಪ ಶಿಕ್ಷಣ ಪದ್ಧತಿ ಜಾರಿಯಾದಾಗ ಮಾತ್ರ ಭಾಷೆಯೊಂದರ ಉಳಿವು ಸಾಧ್ಯವಾಗಲಿದೆ. ನಮಗೆ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯೂ ಬೇಕು. ಆದರೆ ಇಂಗ್ಲಿಷ್ ಸಂಸ್ಕೃತಿ ಬೇಡ. ಯಾವುದೇ ಟೀಕೆಗಳು ಕುಚೋದ್ಯದಿಂದ ಕೂಡಿರದೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುವಂತಾಗಬೇಕು. ಭೀಭತ್ಸ ಚಿಂತನೆಯ ಬದಲು ಮನುಕುಲವನ್ನು ಪೋಷಿಸುವ ಚಿಂತನೆಗಳು ನಮ್ಮಲ್ಲಿ ವಿಜೃಂಭಿಸುವಂತಾಗಬೇಕು. ಇತರ ಕಾರ್ಯಗಳೊಂದಿಗೆ ಕನ್ನಡಕ್ಕಾಗಿ ದುಡಿಯುವ ಮನೋಭಾವವೂ ನಮ್ಮದಾಗಬೇಕು ಎಂದರು.
ಈ ಸಂದಭರ್ದಲ್ಲಿ ಸಮ್ಮೇಳನಾಧ್ಯಕ್ಷ ಗೋಪಾಲಕೃಷ್ಣ ಕುಂಟಿನಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಯು.ವಿ.ಭಟ್, ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯದರ್ಶಿ ರವೀಂದ್ರ ದರ್ಬೆ, ಕಸಾಪ ಪುತ್ತೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ವರದರಾಜ ಚಂದ್ರಗಿರಿ, ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಯ್ದೀನ್ ಕುಟ್ಟಿ, ಮುಖ್ಯ ಗುರು ದೇವಕಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನ ಸಮಿತಿಯ ಕೋಶಾಧಿಕಾರಿ ಕರುಣಾಕರ ಸುವರ್ಣ ಸ್ವಾಗತಿಸಿದರು. ಕಸಾಪ ಪುತ್ತೂರು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಡಾ. ಶ್ರೀಧರ ಎಚ್.ಜಿ. ವಂದಿಸಿದರು. ಡಾ. ಗೋವಿಂದ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಐ. ಹಾಗೂ ಕೈಲಾರ್ ರಾಜಗೋಪಾಲ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಮತ್ತು ವಿದುಷಿ ನಯನಾ ವಿ. ರೈ ಇವರ ಶಿಷ್ಯವೃಂದದಿಂದ ‘ನೀರ ನೆರವಿನ ನೇತ್ರಾವತಿ’ ನೃತ್ಯ ರೂಪಕ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News