ಪಡುಬಿದ್ರೆ: ಯುವವಾಹಿನಿ ಘಟಕದಿಂದ ಇನ್ಸ್‌ಪೆಕ್ಟರ್ ಅಝ್ಮತ್ ಅಲಿಗೆ ಸನ್ಮಾನ
ಪಡುಬಿದ್ರೆ, ನ.7: ಪಡುಬಿದ್ರೆಯಲ್ಲಿ ಮೂರುವರೆ ವರ್ಷಗಳ ಕಾಲ ಎಸೈ ಆಗಿ ಸೇವೆ ಸಲ್ಲಿಸಿ ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿಗೊಂಡ ಅಝ್ಮತ್ ಅಲಿಯವರನ್ನು ಯುವವಾಹಿನಿ ಹೆಜಮಾಡಿ ಘಟಕ ಮತ್ತು ಹೆಜಮಾಡಿ ನಾಗರಿಕರ ಜಂಟಿ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವರ ಸಂಘದಲ್ಲಿ ರವಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಧಾರ್ಮಿಕ ಹಿತಚಿಂತಕ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳು ಬಹಳ ವಿರಳವಾದುದು. ಮಾತ್ರವಲ್ಲದೆ ಅವರ ಕೆಲಸಗಳನ್ನು ಗುರುತಿಸುವ ಶ್ರೀಮಂತಿಕೆ ತೀರಾ ಕಡಿಮೆ ಇದೆ. ಸಮಾಜವು ಪೊಲೀಸರನ್ನು ನೋಡುವ ನಕರಾತ್ಮಕ ದೃಷ್ಟಿಕೋನ ಬದಲಾಗಬೇಕು. ಪೊಲೀಸರು ಸಾಮ, ದಾನ, ಭೇದ ದಂಡಗಳಂಥಹ ಚತುರೋಪಾಯಗಳನ್ನು ಕರಗತ ಮಾಡಿಕೊಳ್ಳಬೇಕು. ಅದೇ ಸಮಯದಲ್ಲಿ ಸಮಾಜಮುಖಿಯಾಗಿ ಬಾಳಿ ಜನರ ಪ್ರೀತಿ ಸಂಪಾದಿಸಿದರೆ ದೇವರು ಮೆಚ್ಚಿದನೆಂದೇ ಅರ್ಥ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜ್ಮತ್ ಅಲಿ, ತಮ್ಮ ಗುರುಹಿರಿಯರು, ಕುಟುಂಬ ವರ್ಗ ಮತ್ತು ಪೊಲೀಸ್ ಇಲಾಖಾ ಸಹವರ್ತಿಗಳನ್ನು ಸ್ಮರಿಸಿಕೊಂಡು ಧನ್ಯವಾದ ಸಲ್ಲಿಸಿದರು.
ಬಳಿಕ ಬಿಲ್ಲವ ಸಂಘ ಹೆಜಮಾಡಿ, ಹೆಜಮಾಡಿ ಗ್ರ.ಪಂ, ಪಡುಕೆರೆ ಬಿಲ್ಲವರ ಸಮಿತಿ, ಆಟೋ ರಿಕ್ಷಾ ಯೂನಿಯನ್ ಹೆಜಮಾಡಿ, ವಿಶ್ವಕರ್ಮ ಬ್ರಹ್ಮ ಸಮಾಜ ಸೇವಾ ಸಂಘ, ಬ್ರಹ್ಮಮುಗ್ಗೇರ್ಕಳ ದೈವಸ್ಥಾನ ಕೋಡಿ, ವೀರಮಾರುತಿ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದ ಮುನ್ನ ಯುವವಾಹಿನಿ ಘಟಕದ ಆಶ್ರಯದಲ್ಲಿ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಉದ್ಯಮಿ ಪಠೇಲ್ ವಾಸುದೇವ ರಾವ್ ಅಧ್ಯಕ್ಷತೆ ವಹಿಸಿದ್ದರು. ಹೆಜಮಾಡಿ ಬಿಲ್ಲವ ಸಂಘ ಅಧ್ಯಕ್ಷ ಧೀನ್‌ರಾಜ್ ಬಂಗೇರ, ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷ ಲೋಕೇಶ್ ಅಮೀನ್, ಬ್ರಹ್ಮಸ್ತನದ ಪ್ರಧಾನ ಪಾತ್ರಿ ಪಿ.ಬಿ. ನಾರಾಯಣ ರಾವ್ ಮುಂತಾದವರು ಉಪಸ್ಥಿತರಿದ್ದರು.