ಹೆಚ್ಚುತ್ತಿರುವ ಮಾಲಿನ್ಯದಿಂದ ಶ್ವಾಸನಾಳಗಳ ಸೋಂಕು ಹೆಚ್ಚಳ: ಡಾ.ಅನಂತ ಪೈ

Update: 2016-11-07 11:52 GMT

ಮಂಗಳೂರು,ನ.7:ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಮಂಗಳೂರಿನಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ.40ರಷ್ಟು ವಾಯುನಾಳದ ಸೋಂಕು ಕಾರಣವಾಗಿದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ಮಂಗಳೂರು ಘಟಕದ ಅಧ್ಯಕ್ಷ ಡಾ.ಅನಂತ ಪೈ ತಿಳಿಸಿದ್ದಾರೆ.

ವಿಶ್ವ ನ್ಯುಮೋನಿಯಾ ದಿನದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಗರದಲ್ಲಿ ಅತಿಯಾದ ವಾಯು ಮಾಲಿನ್ಯ, ಜನದಟ್ಟಣೆ, ಸ್ವಚ್ಛತೆ, ತಾಯಂದಿರಿಗೆ ಅರಿವಿನ ಕೊರತೆ ಈ ಸೋಂಕು ಹರಡಲು ಪ್ರಮುಖ ಕಾರಣ. ನ್ಯುಮೋನಿಯಾದ ಸಾಮಾನ್ಯ ಲಕ್ಷಣ ಒಣ ಕೆಮ್ಮು, ಎದೆ ನೋವು, ಜ್ವರ, ಚಳಿ ನಡುಕ, ಉಸಿರಾಟದ ತೊಂದರೆ, ವಾಕರಿಕೆ, ಸುಸ್ತು, ಹೆಚ್ಚಿದ ಎದೆ ಬಡಿತ ಈ ಲಕ್ಷಣ ಕಂಡು ಬಂದರೆ ಎದೆಯ ಎಕ್ಸ್‌ರೇ ಮಾಡಿಸಿಕೊಂಡಾಗ ರೋಗದ ಬಗ್ಗೆ ಖಚಿತ ಪಡಿಸಿಕೊಳ್ಳಬಹುದು. ನ್ಯುಮೋನಿಯಾ ಹೊರೆ ಕಡಿಮೆ ಮಾಡಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಅದರ ಪ್ರಕಾರ ಸತು ಮತ್ತು ವಿಟಮಿನ್ ಎ ಯೊಂದಿಗೆ ಶಿಶುಗಳಿಗೆ ಆಹಾರ ನೀಡುವುದು. ಸ್ತನ್ಯಪಾನ, ಮಾಲಿನ್ಯ ತಡೆಗಟ್ಟುವುದು, ಅಂಗಾಂಗಗಳ ಸ್ವಚ್ಛತೆ, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಪ್ರಮುಖ ಅಂಶಗಳಾಗಿವೆ.

ವಿಶ್ವದ ಶೇ.44 ನ್ಯುಮೋನಿಯಾ ಪ್ರಕರಣಗಳು ಐದು ದೇಶಗಳಲ್ಲಿ ಕಂಡು ಬರುತ್ತಿದ್ದು ಈ ಪೈಕಿ ಭಾರತವೂ ಒಂದು. ಭಾರತದಂತಹ ದೇಶಗಳಲ್ಲಿ ರಾಷ್ಟ್ರೀಯ ಪ್ರತಿರೋಧಕ ಕಾರ್ಯಕ್ರಮದಲ್ಲಿ ನ್ಯೂಮೊಕೊಕ್ಕಲ್ ಕಾಂಜುಗೇಟ್ ಲಸಿಕೆಯನ್ನು ಆದ್ಯತೆಯ ಮೇರೆಗೆ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ರಾಷ್ಟ್ರೀಯ ಪ್ರತಿರೋಧಕ ಕಾರ್ಯಕ್ರಮದಲ್ಲಿ ಪಿಸಿವಿ ಸೇರಿಸುವುದರಿಂದ ವಿಶ್ವಾದ್ಯಂತ ನ್ಯುಮೋನಿಯಾದ 7-8 ದಶಲಕ್ಷ ಪ್ರಕರಣಗಳನ್ನು ತಡೆಯಲು 0.3-0.5 ದಶಲಕ್ಷ ಸಾವಿನ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಡಾ.ಅನಂತ ಪೈ ತಿಳಿಸಿದರು.

ಮಂಗಳೂರಿನಲ್ಲಿ 0-5ವರ್ಷದೊಳಗಿನ ಮಕ್ಕಳಲ್ಲಿ ವಾಯು ಮಾಲಿನ್ಯ, ಸ್ವಚ್ಛತೆಯ ಕೊರತೆಯಿಂದ ಶ್ವಾಸನಾಳದ ಸೋಂಕು ಹೆಚ್ಚುತ್ತಿದೆ. ನ್ಯುಮೊಕೊಕ್ಕಲ್ ರೋಗವೆಂದು ಕರೆಯಲಾಗುವ ಬ್ಯಾಕ್ಟೀರಿಯಾದಿಂದ ಉಂಟಾಗುವ ಶ್ವಾಸ ಕೋಶದ ಸೋಂಕು ಹೆಚ್ಚು ಅಪಾಯಕಾರಿಯಾಗಿದೆ ಎಂದು ಡಾ.ಅನಂತ ಪೈ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಡಾ.ಶ್ರೀಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News