ಬೈಕ್‌ಗೆ ಕಾರು ಢಿಕ್ಕಿ: ಅಕ್ಕ-ತಮ್ಮ ಮೃತ್ಯು
ಉಪ್ಪಿನಂಗಡಿ, ನ.7: ಕಾರು ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಾಗಿದ್ದ ಸಹೋದರ ಹಾಗೂ ಸಹೋದರಿ ಸಾವನ್ನಪ್ಪಿದ ದಾರುಣ ಘಟನೆ ಬಜತ್ತೂರು ಗ್ರಾಮದ ಬೆದ್ರೋಡಿ ಬಳಿ ಸೋಮವಾರ ನಡೆದಿದೆ.
ಅಪಘಾತದಿಂದಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ ಜನಾರ್ದನ ಆಚಾರ್ಯ ಎಂಬವರ ಮಗ ಶಿವಾನಂದ (19) ಹಾಗೂ ಆತನ ಅಕ್ಕ ಅಕ್ಷತಾ (25) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಹಾಸನ ಮೂಲದ ಹರ್ಷ (30), ಅವರ ಪತ್ನಿ ಶುಭಶ್ರೀ (25), ತಂದೆ ಶಿವಯ್ಯ (55), ತಾಯಿ ಕಮಲಮ್ಮ (50), ಅಜ್ಜಿ ಸರ್ವಮಂಗಳ (60) ಗಾಯಗೊಂಡಿದ್ದಾರೆ. ಇವರಲ್ಲಿ ಶಿವಯ್ಯ ಹಾಗೂ ಶುಭಶ್ರೀ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
ನೀರಪಾದೆಯ ಶಿವಾನಂದ ಅವರು ತನ್ನ ಅಕ್ಕ ಅಕ್ಷತಾ ಅವರೊಂದಿಗೆ ಸೋಮವಾರ ಬೆಳಗ್ಗೆ ಗೋಳಿತೊಟ್ಟುವಿನ ಅನಿಲ ಎಂಬಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬೈಕ್‌ನಲ್ಲಿ ತೆರಳಿದ್ದು, ಬೆಳಗ್ಗೆ ಸುಮಾರು 10:30ರ ಸುಮಾರಿಗೆ ಬೆದ್ರೋಡಿ ಎಂಬಲ್ಲಿ ಇವರ ಬೈಕ್‌ಗೆ ಅತೀ ವೇಗದಿಂದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ವ್ಯಾಗನರ್ ಕಾರು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ರಸ್ತೆ ಬದಿಯ ಸುಮಾರು ಆರು ಫೀಟ್‌ನ ತೋಡಿಗೆ ಎಸೆಯಲ್ಪಟ್ಟರೆ, ಕಾರು ಅಲ್ಲೇ ಪಕ್ಕದಲ್ಲಿದ್ದ ತೋಟದಲ್ಲಿ ಅಡಿಮೇಲಾಗಿ ಬಿದ್ದಿದೆ.
ಘಟನೆಯಿಂದ ಗಂಭೀರ ಗಾಯಗೊಂಡ ಬೈಕ್ ಸವಾರರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಉಳಿದ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿದ್ದ ಹರ್ಷ ಹಾಗೂ ಶುಭಶ್ರೀಗೆ ನ. 5ರಂದು ಮದುವೆಯಾಗಿದ್ದು, ಇವರು ಕುಟುಂಬ ಸಮೇತರಾಗಿ ಕಟೀಲು ದೇವಸ್ಥಾನಕ್ಕೆಂದು ತೆರಳುತ್ತಿದ್ದರು. ಬೆದ್ರೋಡಿ ಬಳಿ ಏಕಾಏಕಿ ಕಾರು ಚಾಲಕ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಲ್ಲಿ ಬಂದಿರುವುದೇ ಅಪಘಾತಕ್ಕೆ ಕಾರಣವಾಗಿದೆ.
ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.