ಪುತ್ತಿಗೆ : ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ ಚಾಲನೆ

Update: 2016-11-07 12:08 GMT

ಮೂಡುಬಿದಿರೆ, ನ.7: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಸುವುದು ಹಾಗೂ ಕಾಮಗಾರಿಗಳ ಅನುಷ್ಠಾನಗೊಳಿಸುವ ವಿಶೇಷ ಗ್ರಾಮಸಭೆಗೆ ಶಾಸಕ ಕೆ. ಅಭಯಚಂದ್ರ ಜೈನ್ ಸೋಮವಾರ ಪುತ್ತಿಗೆ ಪಂಚಾಯತ್‌ನ ಸಮುದಾಯ ಭವನದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಜೈನ್, ಎಲ್ಲರೂ ಒಗ್ಗಟ್ಟಿನಿಂದ ಸೇರಿ ಮಾಡಿದ ಕೆಲಸಗಳು ಉತ್ತಮವಾಗಿ ಮೂಡಿ ಬರುತ್ತದೆ. ಹಿಂದೆಗಿಂತ ಈಗ ಉದ್ಯೋಗ ಖಾತರಿಯಲ್ಲಿ ಹೆಚ್ಚಿನ ದಿನಗೂಲಿಯನ್ನು ನೀಡಲಾಗುತ್ತಿದೆ. ಗ್ರಾಮದ ಪ್ರತಿಯೊಬ್ಬರೂ ಈ ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡುವಂತಾಗಬೇಕು. ಹಾಗೂ ಗ್ರಾಮ ಪಂಚಾಯತ್‌ನ ಕಾಮಗಾರಿಗಳನ್ನು ಊರಿನ ಜನರ ಸಹಕಾರದೊಂದಿಗೆ ಮಾಡಬೇಕು. ಕೆರೆಗಳ ಪುನಶ್ಚೇತನ, ಸ್ಮಶಾನಗಳ ಅಭಿವೃದ್ಧಿ, ತೆರೆದ ಬಾವಿಗಳ ರಚನೆ ಮುಂತಾದ ಸಮುದಾಯ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ತಾನು ಕೂಡಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.

ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಅಡಿಗಳ್ ಶ್ರೀನಿವಾಸ ಭಟ್ ಆಶೀರ್ವಚನ ನೀಡಿದರು. ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿ.ಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ತಾ.ಪಂ. ಸದಸ್ಯೆ ವನಿತಾ ನಾಯ್ಕೆ, ಗ್ರಾ.ಪಂ. ಉಪಾಧ್ಯಕ್ಷೆ ಶುಭಾ ಆರ್. ಹೆಬ್ಬಾರ್, ತಾ.ಪಂ. ಕೆಡಿಪಿ ಸದಸ್ಯ ವಾಸುದೇವ ನಾಯಕ್, ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ಜಗನ್ನಾಥ ರೈ ಮತ್ತಿತರರು ಉಪಸ್ಥಿತರಿದ್ದರು.

ಪುತ್ತಿಗೆ ಗ್ರಾ.ಪಂನ ಅರ್ಥಿಗುಂಡಿ ಎಂಬಲ್ಲಿ ಮತ್ತು ಸೋಮನಾಥೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕ ತೆರೆದ ಬಾವಿ, ಕಂಚಿಬೈಲು ಸರಕಾರಿ ಸ್ಮಶಾನ ಅಭಿವೃದ್ಧಿ, ಪಂಚಾಯತ್ ಬಳಿ ಆಟದ ಮೈದಾನ ಮತ್ತು ಗೋದಾಮು ರಚನೆ ಮತ್ತು ಗುಂಡ್ಯಡ್ಕ ಅರ್ಬಿಕಟ್ಟೆ ಕಾಲುವೆ ಅಭಿವೃದ್ಧಿಗೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾರ್ಶಲ್ ಡಿಸೋಜ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News