×
Ad

ಮುಂದಿನ ವರ್ಷದಿಂದ ಮಂಗಳೂರು-ಹಾಸನ-ಬೆಂಗಳೂರು ರೈಲು: ಸಂಸದ ನಳಿನ್

Update: 2016-11-07 19:16 IST

ಮಂಗಳೂರು, ನ.7: ಮುಂದಿನ ವರ್ಷದಿಂದ ಮಂಗಳೂರು-ಹಾಸನ ಮಾರ್ಗವಾಗಿ ಬೆಂಗಳೂರಿಗೆ ರೈಲು ಯಾನ ಪ್ರಾರಂಭಗೊಳ್ಳಲಿದೆ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಅವರು ಇಂದು ಬೈಕಂಪಾಡಿಯ ಕೆನರಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ‘ಸ್ಟಾರ್ಟ್ ಅಪ್ ಇಂಡಿಯಾ-ಸ್ಟಾಂಡ್ ಅಪ್ ಇಂಡಿಯಾ ಸೆಲ್’ನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಂಗಳೂರಿನಿಂದ ಬೆಂಗಳೂರಿಗೆ ಹೆಚ್ಚಿನ ರೈಲ್ವೆಗಳ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಈಗಿರುವ ಮಂಗಳೂರು, ಮೈಸೂರು, ಹಾಸನ, ಬೆಂಗಳೂರು ರೈಲು ಯಾನ ಸೌಲಭ್ಯದ ಜೊತೆಗೆ ಮಂಗಳೂರಿನಿಂದ ನೇರವಾಗಿ ಹಾಸನ ಮಾರ್ಗವಾಗಿ ಬೆಂಗಳೂರಿಗೆ ಕೇವಲ 9 ತಾಸುಗಳೊಳಗೆ ತಲುಪಲು ಹೊಸ ರೈಲು ಯಾನ ಮುಂದಿನ ವರ್ಷದಿಂದ ಪ್ರಾರಂಭಗೊಳ್ಳಲಿದೆ. ಅಲ್ಲದೆ, ಮಂಗಳೂರಿಗೆ ವಿಶ್ವ ದರ್ಜೆಯ ರೈಲ್ವೆ ಸ್ಟೇಶನ್ ಘೋಷಣೆಯಾಗಿದೆ ಎಂದರು.

ಚತುಷ್ಪಥ ರಸ್ತೆಗೆ ಟೆಂಡರ್

ಬಿ.ಸಿ.ರೋಡ್‌ನಿಂದ ಹಾಸನದವರೆಗಿನ ಚತುಷ್ಪಥ ರಸ್ತೆಯ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ದ.ಕ. ಜಿಲ್ಲೆಯಲ್ಲಿ 48 ಕಿ.ಮೀ. ರಸ್ತೆಗಳು ಕಾಂಕ್ರಿಟೀಕರಣಗೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗೆ ಕೇಂದ್ರದಿಂದ ಈಗಾಗಲೇ ಅನುದಾನ ಬಿಡುಗಡೆಗೊಂಡಿದೆ. ರಾಜ್ಯ ಸರಕಾರ ಅಗತ್ಯವಿರುವ 150 ಎಕರೆ ಜಮೀನನ್ನು ಮಂಜೂರು ಮಾಡಿದರೆ, ರನ್‌ವೇ ವಿಸ್ತರಣೆ ಸಹಿತ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
 
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳಾ ಉದ್ಯಮಿಗಳಿಗಾಗಿ ‘ಸ್ಟಾರ್ಟ್ ಅಪ್ ಇಂಡಿಯಾ-ಸ್ಟಾಂಡ್ ಅಪ್ ಇಂಡಿಯಾ’ ಯೋಜನೆಯನ್ನು ಜಾರಿಗೊಳಿಸಿದೆ. ಇದರ ಸಂಪೂರ್ಣ ಪ್ರಯೋಜನ ಅರ್ಹರಿಗೆ ಸಿಗುವ ನಿಟ್ಟಿನಲ್ಲಿ ಕೆನರಾ ಸಣ್ಣ ಕೈಗಾರಿಕಾ ಸಂಘವು ಪ್ರಯತ್ನಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡುವುದಾಗಿ ಹೇಳಿದರು.

ಮುದ್ರಾ ಯೋಜನೆಯಡಿ ಈಗಾಗಾಲೇ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಬ್ಯಾಂಕಿನವರು ಸತಾಯಿಸದೆ ಸ್ಪಂದಿಸಿ ಸಾಲ ಒದಗಿಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ ನಳಿನ್ ಕುಮಾರ್, ಈಗಾಗಲೇ ದ.ಕ. ಜಿಲ್ಲೆಯಲ್ಲಿ 37,450 ಯುವ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ನೀಡಲಾಗಿದ್ದು, ಇದಕ್ಕಾಗಿ 605 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸಂಸದ ನಳಿನ್ ಕುಮಾರ್‌ರಿಗೆ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಎನ್‌ಎಸ್‌ಐಸಿ ಬೆಂಗಳೂರಿನ ಹಿರಿಯ ಬ್ರಾಂಚ್ ಮ್ಯಾನೇಜರ್ ವಿ.ಸುರೇಶ್ ಬಾಬು, ಕ್ರೆಡಿಟ್ ಆರ್.ಒ. ಸಿಂಡಿಕೇಟ್ ಬ್ಯಾಂಕ್ ಉಡುಪಿ ಇದರ ಹಿರಿಯ ವ್ಯವಸ್ಥಾಪಕ ಆನಂದ ಕುಮಾರ್, ದ.ಕ. ಜಿಲ್ಲಾ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಕೆಎಸ್‌ಎಫ್‌ಸಿ ಮಂಗಳೂರು ಇದರ ಡಿಜಿಎಂ ಚಂದ್ರ ಕುಮಾರ್, ಕೆನರಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಜೀವನ್ ಸಲ್ದಾನಾ ಮೊದಲಾದವರು ಉಪಸ್ಥಿತರಿದ್ದರು.

ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹೆನ್ರಿ ಸಿ.ಇ. ಬ್ರಿಟ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ಅಜಿತ್ ಕಾಮತ್ ವಂದಿಸಿದರು. ಉಪಾಧ್ಯಕ್ಷ ಗೌರವ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News