×
Ad

ಮಹಾಮೈತ್ರಿ ಕುರಿತು ಮುಲಾಯಂ ನಿರ್ಧರಿಸುತ್ತಾರೆ:ಅಖಿಲೇಶ

Update: 2016-11-07 19:30 IST

ಲಕ್ನೋ,ನ.7: ಮಹಾಮೈತ್ರಿ ಕುರಿತು ಯಾವುದೇ ನಿರ್ಧಾರವನ್ನು ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರೇ ಕೈಗೊಳ್ಳುತ್ತಾರೆ ಎಂದು ಸೋಮವಾರ ಇಲ್ಲಿ ತಿಳಿಸಿದ ಮುಖ್ಯಮಂತ್ರಿ ಅಖಿಲೇಶ ಯಾದವ್  ಅವರು,ತಾನು ಪಕ್ಷದ ವೇದಿಕೆಯಲ್ಲಿ ಮಾತ್ರ ತನ್ನ ಸಲಹೆಗಳನ್ನು ನೀಡುತ್ತೇನೆ ಎಂದು ಒತ್ತಿ ಹೇಳಿದರು.

ತನ್ನ ಸಂಪುಟ ಸಹೋದ್ಯೋಗಿ ಗಾಯತ್ರಿ ಪ್ರಜಾಪತಿಯವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಲೆಂದು ಅವರ ಅಧಿಕೃತ ನಿವಾಸಕ್ಕೆ ತೆರಳಿದ್ದ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಅಖಿಲೇಶ ಮಹಾಮೈತ್ರಿಯ ಬಗ್ಗೆ ತನ್ನ ನಿಲುವನ್ನು ಬಹಿರಂಗವಾಗಿ ತಿಳಿಸಲು ನಿರಾಕರಿಸಿದರು.

ಎಸ್‌ಪಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವ ಸಾಧ್ಯತೆಯ ಕುರಿತು ಸುದ್ದಿಗಾರರ ನಿರ್ದಿಷ್ಟ ಪ್ರಶ್ನೆಗೆ ನೇರ ಉತ್ತರ ನೀಡುವುದರಿಂದ ನುಣುಚಿಕೊಂಡ ಅವರು, ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಬಯಸಿದರೆ ನೀವು ಅದನ್ನು ತಡೆಯುವಿರಾ ಎಂದು ಪ್ರಶ್ನಿಸಿದರು.

 ಕಾಂಗ್ರೆಸ್ಸಿನ ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಅವರು ಇಲ್ಲಿ ಮುಲಾಯಂ ಅವರನ್ನು ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ವಿವರವಾಗಿ ಉತ್ತರಿಸುವ ಗೋಜಿಗೆ ಅಖಿಲೇಶ ಹೋಗಲಿಲ್ಲ. ಈ ಭೇಟಿಯು ಬಿಹಾರದ ಮಾದರಿಯಲ್ಲಿ ಮಹಾ ಮೈತ್ರಿಯೊಂದು ಉತ್ತರ ಪ್ರದೇಶದಲ್ಲಿ ರೂಪುಗೊಳ್ಳುವ ಬಗ್ಗೆ ವದಂತಿಗಳನ್ನು ಸೃಷ್ಟಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News