ದಿಲ್ಲಿಯ ವಾಯುಮಾಲಿನ್ಯ ಕುರಿತು ಅರ್ಜಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
ಹೊಸದಿಲ್ಲಿ,ನ.7: ದಿಲ್ಲಿಯಲ್ಲಿ ಅಪಾಯದ ಮಟ್ಟವನ್ನು ತಲುಪಿರುವ ವಾಯುಮಾಲಿನ್ಯ ಕುರಿತು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಡೆಸಲಿದೆ.
ವಾಯುಮಾಲಿನ್ಯ ಕುರಿತಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ನೀಡಿದ್ದ ನಿರ್ದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿಲ್ಲ ಎಂದು ತಿಳಿಸಿದ ಅರ್ಜಿದಾರರಾದ ಸೆಂಟರ್ ಫಾರ್ ಸಾಯನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ ಸುನೀತಾ ನಾರಾಯಣನ್ ಅವರು, ನ್ಯಾಯಾಲಯವು ತನ್ನ ನಿರ್ದೇಶಗಳ ಜಾರಿಯ ಮೇಲೆ ನಿಗಾ ಇರಿಸಬೇಕು ಎಂದು ಕೋರಿದ ಬಳಿಕ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಮತ್ತು ನ್ಯಾ.ಎಲ್.ನಾಗೇಶ್ವರ ರಾವ್ ಅವರ ಪೀಠವು ವಿಚಾರಣೆಯನ್ನು ನಡೆಸಲು ಒಪ್ಪಿಕೊಂಡಿತು.
ಶಾಲೆಗಳು ಒಂದು ವಾರ ಬಂದ್ :
ತನ್ಮಧ್ಯೆ ದಿಲ್ಲಿಯ ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಶಾಲೆಗಳನ್ನು ನವಂಬರ್ 9ರವರೆಗೆ ಮುಚ್ಚುವಂತೆ ರವಿವಾರ ಆದೇಶಿಸಿದ್ದ ದಿಲ್ಲಿ ಸರಕಾರವು ಇಂದು ಅದನ್ನು ಪರಿಷ್ಕರಿಸಿ ಶಾಲೆಗಳನ್ನು ನ.12ರವರೆಗೆ ಮುಚ್ಚಲು ನಿರ್ಧರಿಸಿದೆ. ಈ ಎಲ್ಲ ಶಾಲೆಗಳು ಪ್ರಾಥಮಿಕ ಶಾಲೆಗಳಾಗಿದ್ದು ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಕಾರ್ಯಾಚರಿಸುತ್ತವೆ. ಬೆಳಿಗ್ಗೆ ದಟ್ಟ ಮಂಜು ಬಿದ್ದಿರುತ್ತದೆ ಮತ್ತು ಸಂಜೆ ವಾಯು ಮಾಲಿನ್ಯವು ಗರಿಷ್ಠ ಮಟ್ಟದಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ದಕ್ಷಿಣ ದಿಲ್ಲಿ ಮಹಾನಗರ ಪಾಲಿಕೆ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದರು.