ಕೊಳಚೆ ನೀರು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಟ್ಟರೆ ಕ್ರಿಮಿನಲ್ ಕೇಸ್

Update: 2016-11-07 14:18 GMT

ಬಂಟ್ವಾಳ, ನ.7: ಮನೆ, ಕಟ್ಟಡಗಳ ಕೊಳಚೆ ನೀರನ್ನು ಇನ್ನೊಬ್ಬರ ಅಂಗಳಕ್ಕೆ ಇಲ್ಲವೇ ಸಾರ್ವಜನಿಕ ರಸ್ತೆಗೆ ಹರಿಯ ಬಿಡುವುದರ ಮೂಲಕ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಮನೆ, ಕಟ್ಟಡಗಳ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಇಲ್ಲವೆ ನಿರ್ಬಂಧಿಸುವ ಕುರಿತು ಸೋಮವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಅಜಂಡಾ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಬಿ.ಮೋಹನ್, ಬಿ.ಸಿ.ರೋಡಿನಲ್ಲಿರಸ್ತೆಯಲ್ಲೇ ಕೊಳಚೆ ನೀರು ಹರಿಯುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಇದರ ನಿರ್ವಹಣೆ ಮಾಡಬೇಕಾಗಿದೆ. ಆದರೆ ಸಾರ್ವಜನಿಕರು ಪುರಸಭೆಯನ್ನೇ ದೂರುವಂತಾಗಿದೆ. ಎರಡು ದಿನಗಳ ಹಿಂದೆ ಎಲ್ಲ ಮಾಧ್ಯಮದಲ್ಲೂ ಕೂಡಾ ಈ ಬಗ್ಗೆ ವರದಿ ಪ್ರಕಟವಾಗಿದ್ದು ಕಟ್ಟಡ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್, ಅಂತಹ ಮನೆ, ಕಟ್ಟಡಗಳ ಮಾಲಕರಿಗೆ ಪುರಸಭೆಯಿಂದ ನೋಟಿಸ್ ಜಾರಿಮಾಡಲಾಗಿದೆ. ಆದರೆ ನೋಟಿಸ್‌ಗೆ ಅವರ್ಯಾರು ಸ್ಪಂದನೆ ನೀಡಿಲ್ಲ ಎಂದು ಹೇಳಿದಾಗ ಎಲ್ಲ ಸದಸ್ಯರು ಪುರಸಭೆಗೆ ದಮ್ಮಿಲ್ಲ. ಆದ್ದರಿಂದ ನೋಟಿಸ್‌ಗೆ ಯಾರೂ ಕ್ಯಾರೇ ಮಾಡುತ್ತಿಲ್ಲ. ಇಂತಹ ಕಟ್ಟಡಕ್ಕೆ ಪೊಲೀಸರ ಸಹಕಾರದೊಂದಿಗೆ ಬೀಗ ಜಡಿಯಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಪುರಸಭೆ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಕೊಳಚೆ ನೀರು ಹರಿದು ಹೋಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಚರಂಡಿಯನ್ನು ದುರಸ್ತಿ ಪಡಿಸುವ ಬಗ್ಗೆ ಸೂಚಿಸಲಾಗುವುದು ಎಂದರು. ಸದಸ್ಯರ ಸಲಹೆಯಂತೆ ಈ ರೀತಿ ಕೊಳಚೆ ನೀರು ಹೆದ್ದಾರಿಗೆ ಅಥವಾ ಒಬ್ಬರ ಮನೆಯ ಕೊಳಚೆ ನೀರನ್ನು ಮತ್ತೊಬ್ಬರ ಮನೆಯ ಅಂಗಳಕ್ಕೆ ಹರಿಯ ಬಿಡುವುದರ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಂತವರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಇಲ್ಲವೇ ನಿರ್ಬಂಧಿಸುವುದಾಗಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಅಧಿಕಾರಿಗೆ ತರಾಟೆ

ಎರಡನೆ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದಾಗಿ ಪುರಸಭಾ ವ್ಯಾಪ್ತಿಯ ವಿವಿಧೆಡೆ ರಸ್ತೆಗಳು ತೀವ್ರ ಹದಗೆಟ್ಟಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೆಯುಡಬ್ಲುಸಿ ಅಧಿಕಾರಿ ಶೋಭಾಲತಾರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶೋಭಾಲತಾ, ಹಾಳಾದ ರಸ್ತೆಗಳ ದುರಸ್ತಿಗೆ ಈಗಾಗಲೇ 4 ಕೋಟಿ ರೂ. ಮೀಸಲಿಟ್ಟಿದೆ ಎಂದು ಮಾಹಿತಿ ನೀಡಿದಾಗ ಕೆರಳಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಸಹಿತ ಸದಸ್ಯರೆಲ್ಲರೂ ಹೆಚ್ಚುವರಿ ಅನುದಾನವನ್ನು ನೀಡಬೇಕೆಂದು ಒತ್ತಾಯಿಸಿದರು.

ಸದಸ್ಯ ಗೋವಿಂದ ಪ್ರಭು ಮಧ್ಯ ಪ್ರವೇಶಿಸಿ ಈ ಮೊದಲು ರಸ್ತೆ ಸಂಬಂಧಿಸಿ ಚರ್ಚೆ ನಡೆಯುವ ವೇಳೆ ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ರಸ್ತೆ ದುರಸ್ತಿಗೆ 16.5 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ ಕೇವಲ 4 ಕೋಟಿ ರೂ.ಯಷ್ಟೇ ಮಾತ್ರ ಮೀಸಲಿಟ್ಟಿದೆ ಎಂದು ತಾವು ಹೇಳುವುದಾದರೆ ಇದರಲ್ಲಿ ಯಾವುದು ಸರಿ ಯಾವುದು ತಪ್ಪುಎಂದು ಸ್ಪಷ್ಟಪಡಿಸುವಂತೆ ಮುಖ್ಯಾಧಿಕಾರಿಯನ್ನು ಸಹಿತ ಕೆಯುಡಬ್ಲುಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಈ ವಿಚಾರದಲ್ಲಿ ಸುದೀರ್ಘ ವಿಚಾರ ನಡೆದ ಬಳಿಕ ಜಮೀನು ಖರೀದಿ ಸೇರಿದಂತೆ ರಸ್ತೆ ದುರಸ್ತಿಗೆ ಹೆಚ್ಚುವರಿ ಅನುದಾನ ಕೋರಿ ಹೊರ ಪ್ರಸ್ತಾವನೆಯನ್ನು ಸಲ್ಲಿಸಲು ನಿರ್ಧರಿಸುವ ಮೂಲಕ ಚರ್ಚೆಗೆ ತೆರೆ ಎಳೆಯಲಾಯಿತು. ಸಭೆಯಲ್ಲಿ ಮಂಡಿಸಲಾದ ಪಾಲನಾ ವರದಿಯ ಮಂಜೂರಾತಿಗೆ ಉಲ್ಲೇಖಿಸಲಾದ 6 ಅಂಶಗಳಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಾಕೃತಿಕ ವಿಕೋಪದಲ್ಲಿ ಹಾನಿಗೊಳಗಾದ ದಾರಿದೀಪ, ವಿದ್ಯುತ್ ಕಂಬ ಅಳವಡಿಸದ ಬಗ್ಗೆ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಬಿ.ಸಿ.ರೋಡ್ ಮುಖ್ಯ ವೃತ್ತ ಬಳಿ ಖಾಸಗಿ ಬಸ್ಸು ನಿಲ್ದಾಣ ಮತ್ತು ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿ.ಪಿ. ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ನೀಲ ನಕ್ಷೆ ಮತ್ತು ಕ್ರಿಯಾಯೋಜನೆ ತಯಾರಿಗೆ 4.95 ಲಕ್ಷ ರೂ. ಪಾವತಿಸುವಂತೆ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. 2011ರಲ್ಲೇ ಇದೇ ಸ್ಥಳದಲ್ಲಿ ಖಾಸಗಿ ಬಸ್ಸು ನಿಲ್ದಾಣ ನಿರ್ಮಿಸುವ ಬಗ್ಗೆ ನಿರ್ಣಯ ಕೈಗೊಂಡು ಅಂದಾಜು ಪಟ್ಟಿ ತಯಾರಿಸಿ ನೀಲನಕ್ಷೆ ಕೂಡಾ ಸಿದ್ಧಪಡಿಸಲಾಗಿತ್ತು. ಆ ಯೋಜನೆ ಈಗ ಏನಾಗಿದೆ ಎಂದು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದಾಗ ಇದಕ್ಕೆ ಯಾರು ಕೂಡಾ ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ಪಭು, ಮುಖ್ಯಾಧಿಕಾರಿ ಹಾಗೂ ಇಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಷ್ಟಕ್ಕೆ ಎಲ್ಲವನ್ನೂ ನಿರ್ಧರಿಸುವುದಾದರೆ ತಮಗೆ ಮನಬಂದಂತೆ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿ ಸುಮ್ಮನಾದರು.

ಸಬಾಧ್ಯಕ್ಷತೆಯನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದರು. ತರಬೇತಿ ಐಎಎಸ್ ಅಧಿಕಾರಿ ಗಾರ್ಜಿ ಜೈನ್ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ ವಂದಿಸಿದರು. ಸದಸ್ಯರಾದ ವಸಂತಿ ಚಂದಪ್ಪ, ಮುಹಮ್ಮದ್ ಇಕ್ಬಾಲ್ ಐ.ಎಂ.ಆರ್., ಗೂಡಿನಬಳಿ, ಶರೀಫ್, ಮುನೀಸ್ ಅಲಿ, ಪ್ರಭಾ ಆರ್. ಸಾಲ್ಯಾನ್, ಚಂಚಲಾಕ್ಷಿ, ಭಾಸ್ಕರ ಟೈಲರ್, ಸುಗುಣಾ ಕಿಣಿ, ಗಂಗಾಧರ, ಲೋಕೇಶ ಅಲೆತ್ತೂರು, ಯಾಸ್ಮಿನ್, ಮುಮ್ತಾಝ್ ಬಾನು ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

ಜೋಡುಮಾರ್ಗ ಉದ್ಯಾನವನ ಪ್ರವೇಶಕ್ಕೆ ಶುಲ್ಕ ನಿಗದಿ

ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಜೋಡುಮಾರ್ಗ ಉದ್ಯಾನವನದ ಪ್ರವೇಶಕ್ಕೆ ಶುಲ್ಕ ವಿಧಿಸಿ ಸಭೆ ನಿರ್ಣಯ ಕೈಗೊಂಡಿತು. 1ರಿಂದ 3 ವರ್ಷದವರೆಗಿನ ಮಕ್ಕಳಿಗೆ ಉಚಿತ ಪ್ರವೇಶ. 3ರಿಂದ 7 ವರ್ಷದವರೆಗಿನ ಮಕ್ಕಳಿಗೆ 5 ರೂ. ಹಾಗೂ 7 ವರ್ಷ ಮೇಲ್ಪಟ್ಟವರಿಗೆ 10 ರೂ.ನಂತೆ ಪ್ರವೇಶ ಶುಲ್ಕ ನಿಗದಿ ಪಡಿಸಿ ಸಭೆ ನಿರ್ಣಯ ಕೈಗೊಂಡಿತು.

ಭಿಕ್ಷುಕರು ಸಹಿತ ಕೆಲ ಸಾರ್ವಜನಿಕರು ಉದ್ಯಾನವನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ. ಹಾಗಾಗಿ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ ಎಂದು ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಅಭಿಪ್ರಾಯ ಪಟ್ಟರೆ ಇದಕ್ಕೆ ಸದಸ್ಯರಾದ ಜಗದೀಶ್ ಕುಂದರ್, ಚಂಚಲಾಕ್ಷಿ, ಜೆಸಿಂತಾ ದ್ವನಿಗೂಡಿಸಿದರು. ಕೊನೆಗೆ ಸುದೀರ್ಘ ಚರ್ಚೆಯ ಬಳಿಕ ಈ ಮೇಲಿನಂತೆ ಶುಲ್ಕ ವಿಧಿಸಲು ನಿರ್ಧರಿಸಲಾಯಿತು. ಇದರ ನಿರ್ವಹಣೆಯ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಸಚಿವ ರಮಾನಾಥ ರೈ ಸೂಚನೆಯ ಮೇರೆಗೆ ಅರಣ್ಯ ಇಲಾಖೆ ಇದರ ನಿರ್ವಹಣೆಯನ್ನು ವಹಿಸಿಕೊಳ್ಳಲಿದೆ ಎಂದು ಅಧ್ಯಕ್ಷ ರಾಮಕೃಷ್ಣ ಆಳ್ವ ಸಭೆಗೆ ಮಾಹಿತಿ ನೀಡಿದರು.

ಈಗಾಗಲೇ ಪರಿಸರ ಇಲಾಖೆ ಈ ಉದ್ಯಾನವನ್ನು ಪುರಸಭೆಗೆ ಹಸ್ತಾಂತರಿಸಿದೆ ಎಂದು ಬಿಜೆಪಿ ಸದಸ್ಯರ ಪ್ರಶ್ನೆಗೆ ಮುಖ್ಯಾಧಿಕಾರಿ ಉತ್ತರಿಸಿದರು. ಉದ್ಯಾನವನದ ನಿರ್ವಹಣೆಯ ಕುರಿತಂತೆ ಕಳೆದ ಸಾಮಾನ್ಯ ಸಭೆೆಯಲ್ಲಾದ ನಿರ್ಣಯವನ್ನು ತಿರುಚಿ ನಿರ್ಣಯ ದಾಖಲಿಸಿರುವ ಬಗ್ಗೆ ಬಿಜೆಪಿ ಸದಸ್ಯರು ಆಕ್ರೊಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News