×
Ad

‘ಟಿಪ್ಪು ಹೆಸರಿನಲ್ಲಿ ಶೂದ್ರ, ದಲಿತ ಯುವಕರ ಬಲಿಗೆ ಸಂಘಪರಿವಾರದ ಸಂಚು’

Update: 2016-11-07 20:01 IST

ಉಡುಪಿ, ನ.7: ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ವಿರೋಧಿಸುವ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಜನರಲ್ಲಿ ದ್ವೇಷ ಬಿತ್ತಿ ಹಿಂಸೆ ನಡೆಸುವ ಸಾಧ್ಯತೆಗಳಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯು ಸೋಮವಾರ ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ.ಬಾಲಕೃಷ್ಣರಿಗೆ ಮನವಿ ಸಲ್ಲಿಸಿತು.

ಕಳೆದ ಬಾರಿ ಬಿಜೆಪಿ ಕರ್ನಾಟಕದ ಹಲವು ಭಾಗಗಳಲ್ಲಿ ಉದ್ವಿಗ್ನತೆಯನ್ನು ನಿರ್ಮಾಣ ಮಾಡಿ ಕೊಡಗಿನಲ್ಲಿ ಜೀವವೊಂದನ್ನು ಬಲಿ ತೆಗೆದುಕೊಂಡಿದ್ದು, ಈ ವರ್ಷ ಮತ್ತೆ ಅದೇ ರೀತಿ ಕೋಮು ಗಲಭೆಯನ್ನು ಸೃಷ್ಟಿಸಲು ಬಹಳ ದೊಡ್ಡ ಷಡ್ಯಂತ್ರ ನಡೆಸುತ್ತಿದೆ. ಶೂದ್ರ,ದಲಿತ ಸಮುದಾಯ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಕಲಹ ಉಂಟು ಮಾಡುವ ಸಂಚು ಹೆಣೆಯಲಾಗುತ್ತಿದೆ ಎಂದು ಸಮಿತಿ ಮನವಿಯಲ್ಲಿ ಆರೋಪಿಸಿದೆ.

ಚಿತ್ರದುರ್ಗದಲ್ಲಿ ಟಿಪ್ಪು ಸುಲ್ತಾನ್ ಮದಕರಿ ನಾಯಕನಿಗೆ ಮಾತುಕತೆಗೆ ಕರೆದು ವಿಷವಿಕ್ಕಿ ಕೊಂದ ಮತ್ತು ಮಾರಮ್ಮನ ಗುಡಿಯನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ ಎಂಬುದಾಗಿ ಹಸಿ ಸುಳ್ಳು ಪ್ರಚಾರವನ್ನು ನಡೆಸಿ, ನಾಯಕ ಮತ್ತು ದಲಿತ ಸಮುದಾಯ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮಧ್ಯೆ ಧ್ವೇಷ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಟಿಪ್ಪು ಜಯಂತಿ ಆಚರಿಸಿದರೆ ಒನಕೆ ಹಿಡಿದುಕೊಂಡು ಬನ್ನಿ ಎಂಬುದಾಗಿ ಬಹಿರಂಗವಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇತಿಹಾಸದ ಭೂತಕಾಲದಲ್ಲಿ ನಡೆದು ಹೋದ ಘಟನೆಗಳನ್ನು ವರ್ತಮಾನದ ಜೊತೆಗೆ ಜೋಡಿಸಿ ಒಡೆದಾಳುವ ಷಡ್ಯಂತ್ರವನ್ನು ಸಂಘಪರಿವಾರ ಮಾಡುತ್ತಿದೆ. ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದ ಟಿಪ್ಪು ಜಯಂತಿಯನ್ನು ಭವಿಷ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ದಿನವಾಗಿ ಪರಿವರ್ತನೆಯಾಗುವ ಅಪಾಯವಿದೆ. ಈ ಹಿಂದೆ ಸಂಘಪರಿವಾರ ಉಡುಪಿ ಜಿಲ್ಲೆಯಲ್ಲಿ ಅಪಾರ ಹಿಂಸೆ ನಡೆಸಿರುವುದರಿಂದ ಇಂತಹ ಶಕ್ತಿಗಳ ವಿರುದ್ಧ ಜಿಲ್ಲಾ ಕಾನೂನು ವ್ಯವಸ್ಥೆಯು ಕಠಿಣ ಕ್ರಮ ಕೈಗೊಂಡು ಸಂಭವಿಸಬಹುದಾದ ದುರಂತವನ್ನು ತಡೆಯಬೇಕು ಎಂದು ಸಮಿತಿಯು ಮನವಿಯಲ್ಲಿ ಎಸ್ಪಿಯನ್ನು ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸುಂದರ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಸುಂದರ ಕಪ್ಪೆಟ್ಟು, ಪರಮೇಶ್ವರ ಉಪ್ಪೂರು, ಭಾಸ್ಕರ್, ಎಸ್.ನಾರಾಯಣ, ವಾಸು ನೇಜಾರು, ಜಿ.ರಾಜಶೇಖರ್, ಫಣಿರಾಜ್, ಇದ್ರೀಸ್ ಹೂಡೆ, ಅಬ್ದುರ್ರಶೀದ್ ಖತೀಬ್, ಅಝೀಝ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News