ಭೋಗದ ರಾಜರಿಗಿಂತ ತ್ಯಾಗದ ಸಂತರ ಸ್ಮರಣೆ: ಸಚಿವ ಪ್ರಮೋದ್

Update: 2016-11-07 16:24 GMT

ಉಡುಪಿ, ನ.7: ಶ್ರೀಮಂತರಾಗಿ ಭೋಗ ಅನುಭವಿಸಿ ಆಡಳಿತ ನಡೆಸಿದ ರಾಜಮಹಾರಾಜರು ಅನೇಕರಿದ್ದರೂ ಕೂಡ ಜನ ಅವರನ್ನು ನೆನಪಿಸಿಕೊಳ್ಳುವ ಬದಲು ಎಲ್ಲವನ್ನೂ ತ್ಯಾಗ ಮಾಡಿ ಸಮಾಜ ಸೇವೆಗೈದ ಸಾಧುಸಂತರನ್ನು ಇಂದಿಗೂ ಸ್ಮರಿಸುತ್ತಾರೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬೆಂಗಳೂರಿನ ಹರಿದಾಸ ರಾಷ್ಟ್ರೀಯ ಪ್ರತಿಷ್ಠಾನವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ನಾಮಸಂಕೀರ್ತನೋತ್ಸವದಲ್ಲಿ ಸೋಮವಾರ ಪರ್ಯಾಯ ಪೇಜಾವರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿ ಚಾರಿತ್ರಗಳು ಇಲ್ಲದೆ ಕೇವಲ ಧಾರ್ಮಿಕ ವೇಷಭೂಷಣ ಮಾತ್ರ ಇದ್ದರೆ, ಅದು ಡಾಂಭಿಕ ಭಕ್ತಿಯಾಗುತ್ತದೆ. ಭೋಗಕ್ಕೆ ಇತಿಮಿತಿ ಇರಬೇಕು. ಕರ್ತವ್ಯದೊಂದಿಗೆ ಭೋಗ ಅನುಭವಿಸಬೇಕು ಎಂದು ಹೇಳಿದರು.

ಚಿನ್ಮಯ ಮಿಶನ್ ಮುಖ್ಯಸ್ಥ ಶ್ರೀಬ್ರಹ್ಮಾನಂದ ಸ್ವಾಮೀಜಿ, ಚಿನ್ಮಯ ಮಿಶನ್‌ನ ಶ್ರೀಪೂರ್ಣಪ್ರಜ್ಞಾನಂದ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಎಡಿಜಿಪಿ (ಅಪರಾಧ) ಭಾಸ್ಕರ ರಾವ್, ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಡಿ.ಪಿ.ಅನಂತ್ ಉಪಸ್ಥಿತರಿದ್ದರು.

ಹರಿದಾಸ ಪ್ರತಿಷ್ಠಾನದ ಮುಖ್ಯಸ್ಥ ಎಂ.ಎಸ್.ಪ್ರಕಾಶ್ ಕೌಶಿಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಬಿ.ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News