×
Ad

"ಆರೋಪಿಗಳು ಆರೆಸ್ಸೆಸ್‌ನವರಾಗಿದ್ದರಿಂದ ಪ್ರಕರಣ ದಾಖಲಿಸಲಿಲ್ಲ"

Update: 2016-11-08 08:54 IST

ಪೆಟ್ಲಬಾದ್ (ಮಧ್ಯಪ್ರದೇಶ), ನ.8: ಕಳೆದ ತಿಂಗಳು ಪಟ್ಟಣದಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ಮಧ್ಯಪ್ರದೇಶ ಪೊಲೀಸರು ನಾಲ್ಕು ಹಂತದ ವರದಿ ಸಿದ್ಧಪಡಿಸಿದ್ದು, ಆರೆಸ್ಸೆಸ್ ಜಿಲ್ಲಾ ಸಹಕಾರ್ಯವಾಹ ಆಕಾಶ್ ಚೌಹಾಣ್ ಹಾಗೂ ಅವರ ತಂದೆ ಮುಕುಟ್ ಅವರು ಪೆಟ್ಲವಾಡ್ ನಗರ ಪಂಚಾಯ್ತಿ ಚುನಾವಣೆಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಿಸುವ ಪ್ರಯತ್ನವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಿದೆ.
 "ಅವರು ಪೆಟ್ಲವಾಡ್ ನಗರ ಪಂಚಾಯ್ತಿ ಚುನಾವಣೆಯಲ್ಲಿ ಹಿಂದೂ ಮತಗಳನ್ನು ಧ್ರುವೀಕರಿಸುವ ಪ್ರಯತ್ನವಾಗಿ ಹಿಂಸಾಚಾರ ಭುಗಿಲೇಳುವಂತೆ ಮಾಡಿದರು. ಆದರೆ ಅವರ ಪ್ರಯತ್ನವನ್ನು ಪೊಲೀಸರು ತಡೆದು ಹಿಂಸಾಚಾರ ಹರಡದಂತೆ ನೋಡಿಕೊಂಡರು" ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ರಾಕೇಶ್ ವ್ಯಾಸ್ ಸಹಿ ಮಾಡಿದ ವರದಿಯನ್ನು ಝಬೂವಾ ಎಸ್ಪಿ ಸಂಜಯ್ ತಿವಾರಿ ಅವರಿಗೆ ಸಲ್ಲಿಸಲಾಗಿದೆ.
ವರದಿಯಲ್ಲಿ ಉಲ್ಲೇಖವಿರುವ ಇನ್ನೊಂದು ಮಹತ್ವದ ಹಾಗೂ ವಿವಾದಾತ್ಮಕ ಅಂಶವೆಂದರೆ, "ಆಡಳಿತಾತ್ಮಕ ಕಾರಣದಿಂದ ಹಾಗೂ ಇಬ್ಬರೂ ಆರೆಸ್ಸೆಸ್ ಹಿನ್ನೆಲೆಯವರಾದ್ದರಿಂದ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ" ಎನ್ನುವುದು. ಆದರೆ ವಾಸ್ತವವಾಗಿ ಅಕ್ಟೋಬರ್ 12ರಿಂದ 14ರವರೆಗೆ ನಡೆದ ಈ ಎಲ್ಲ ಘಟನೆಗಳಿಗೆ ಸಂಬಂಧಪಟ್ಟಂತೆ ಅಪರಾಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಶೇಕಡ 95ರಷ್ಟು ಜನರನ್ನು ರಕ್ಷಿಸಲಾಗಿದೆ ಎಂದೂ ವರದಿ ಹೇಳಿಕೊಂಡಿದೆ.
ಆದರೆ ಈ ವರದಿಯನ್ನು ದೃಢಪಡಿಸಲು ಎಸ್ಪಿ ತಿವಾರಿ ನಿರಾಕರಿಸಿದ್ದಾರೆ. ಆದಾಗ್ಯೂ ಅಕ್ಟೋಬರ್ 13ರ ಗಲಭೆಯಲ್ಲಿ ಆರೆಸ್ಸೆಸ್ ಮುಖಂಡರ ಕೈವಾಡವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News