ಐಆರ್‌ಎಫ್ ವಿರುದ್ಧದ ತನಿಖೆ ಕೈಬಿಟ್ಟ ಮಹಾರಾಷ್ಟ್ರ ಪೊಲೀಸರು

Update: 2016-11-08 03:59 GMT

ಮುಂಬೈ, ನ.8: ಹಣ ದುರ್ಬಳಕೆ ಅಥವಾ ಯಾವುದೇ ವಂಚನೆ ಪ್ರಕರಣ ದಾಖಲಾಗದಿರುವ ಹಿನ್ನೆಲೆಯಲ್ಲಿ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್‌ಎಫ್) ಸ್ವಯಂಸೇವಾ ಸಂಸ್ಥೆಯ ಮತ್ತು ಮುಖ್ಯಸ್ಥ ಝಾಕಿರ್ ನಾಯ್ಕೆ ವಿರುದ್ಧದ ತನಿಖೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ.
"ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ನಮಗೆ ದೂರು ಬರಬೇಕು. ಐಆರ್‌ಎಫ್ ಪ್ರಕರಣದಲ್ಲಿ 60 ಕೋಟಿ ರೂ. ದೇಣಿಗೆ ಸಂಶಯಾಸ್ಪದವಾಗಿ ಬಂದಿದೆ. ಆದರೆ ಈ ಬಗ್ಗೆ ದೂರು ನೀಡಲು ಯಾರೂ ಮುಂದೆ ಬಂದಿಲ್ಲ. ಹಾಗೂ ತಮಗೆ ವಂಚನೆಯಾಗಿದೆ ಎಂದೂ ಯಾರೂ ದೂರು ನೀಡಿಲ್ಲ. ಅದಲ್ಲದೇ ವಂಚನೆ ಮಾರ್ಗದಿಂದ ಈ ಹಣ ಸಂಗ್ರಹಿಸಲಾಗಿದೆ ಎಂಬ ದೂರೂ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ಅಂತ್ಯಗೊಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಕಳೆದ ಜುಲೈನಲ್ಲಿ ಢಾಕಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ ಇಬ್ಬರು ಆರೋಪಿಗಳು, ತಾವು ಝಾಕಿರ್ ನಾಯ್ಕೋ ಪ್ರವಚನದಿಂದ ಸ್ಫೂರ್ತಿ ಪಡೆದು ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಐಆರ್‌ಎಫ್ ವಿರುದ್ಧ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿತ್ತು. ಮುಂಬೈ ಪೊಲೀಸ್ ಪಡೆಯ ಗುಪ್ತಚರ ವಿಭಾಗ ಕಳೆದ ಆಗಸ್ಟ್‌ನಲ್ಲಿ ವರದಿ ಸಲ್ಲಿಸಿ, ಭಯೋತ್ಪಾದಕ ಪರ ಪ್ರವಚನಗಳನ್ನು ಝಾಕಿರ್ ನಾಯ್ಕಾ ನೀಡುತ್ತಿದ್ದಾರೆ ಎಂದು ಆಪಾದಿಸಿತ್ತು. ಜತೆಗೆ ಐಆರ್‌ಎಫ್‌ನ ಹಣಕಾಸು ವಿವರಗಳ ಬಗ್ಗೆಯೂ ಉಲ್ಲೇಖಿಸಿ, ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆ ಈ ಬಗ್ಗೆ ತನಿಖೆ ನಡೆಸಬೇಕು ಎಂದೂ ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News