ಮಕ್ಕಳ ಅಭಿವೃದ್ಧಿ ಸೂಚ್ಯಂಕದಲ್ಲಿ ರಾಜ್ಯಕ್ಕೆ ದ.ಕ. ಪ್ರಥಮ!
ಮಂಗಳೂರು, ನ.8: ಮಾನವ ಅಭಿವೃದ್ಧಿ, ಮಹಿಳೆಯರ ಸ್ಥಾನಮಾನ, ಆಹಾರ ಭದ್ರತೆ ಸೂಚ್ಯಂಕಗಳಲ್ಲಿ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದ್ದರೆ, ಮಕ್ಕಳ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ರಾಜ್ಯದ 30 ಜಿಲ್ಲೆಗಳಿಗೆ ಹೋಲಿಕೆ ಮಾಡಿದಾಗ ಜಿಲ್ಲೆಯ ಅಭಿವೃದ್ದಿ ಸೂಚ್ಯಂಕ ಅತ್ಯುತ್ತಮ ಸ್ಥಾನದಲ್ಲಿದ್ದು, ಅದನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯವಿರುವ ಬಗ್ಗೆ ಚಿಂತನೆಯ ಅಗತ್ಯತೆಯನ್ನು ರಾಜ್ಯದ 4ನೆ ಹಣಕಾಸು ಆಯೋಗ ವ್ಯಕ್ತಪಡಿಸಿದೆ. ದ.ಕ.ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್‌ಗಳ ಜನಪ್ರತಿನಿಧಿಗಳ ಜತೆಗಿನ ಸಮಾಲೋಚನಾ ಸಭೆಯಲ್ಲಿ ಈ ಅಭಿಪ್ರಾಯ ಆಯೋಗದ ಸದಸ್ಯ ಡಾ. ಎಚ್. ಶಶಿಧರ್‌ರಿಂದ ವ್ಯಕ್ತವಾಯಿತು. ಆಯೋಗವು ಈಗಾಗಲೇ ರಾಜ್ಯದ 16 ಜಿಲ್ಲೆಗಳಿಗೆ ಭೇಟಿ ನೀಡಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ ಕುರಿತಂತೆ ಜನಪ್ರತಿನಿಧಿಗಳ ಮಾಹಿತಿಯನ್ನು ಕಲೆ ಹಾಕಿರುವುದಾಗಿ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ತಿಳಿಸಿದರು.
2 ತಿಂಗಳಾದರೂ ಪ್ರಶ್ನಾವಳಿಗಳಿಗೆ ಉತ್ತರ ಬಂದಿಲ್ಲ!
ಜಿಲ್ಲೆಗಳಲ್ಲಿ ಹಣಕಾಸು ಖರ್ಚು ಮತ್ತು ವೆಚ್ಚ ಯಾವ ರೀತಿಯಲ್ಲಿ ಆಗುತ್ತಿದೆ ಎಂಬ ಬಗ್ಗೆ ಪರಿಶೀಲನೆ, ಮೂಲಸೌಕರ್ಯ ವಿಷಯದಲ್ಲಿ ಯಾವ ರೀತಿಯ ಅಭಿವೃದ್ಧಿ ಆಗಿದೆ, ಆಗಬೇಕಾಗಿದೆ ಎಂಬ ನಿಟ್ಟಿನಲ್ಲಿ ಹಣಕಾಸಿನ ವಿಕೇಂದ್ರೀಕರಣ, ಎದುರಿಸುತ್ತಿರುವ ಸಮಸ್ಯೆಗಳು, ಆದ್ಯತೆ ನಿರ್ವಹಣೆ, ಮೂಲಭೂತ ಸೌಕರ್ಯ ಹಾಗೂ ತೆರಿಗೆ ವಸೂಲು ಕುರಿತಂತೆ ಆಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ನೀಡಲಾದ ತರಬೇತಿ ಬಗ್ಗೆ ಅರಿಯುವ ಪ್ರಯತ್ನವನ್ನು ಆಯೋಗ ಮಾಡುತ್ತಿದೆ. ಇದಕ್ಕಾಗಿ ಗ್ರಾ.ಪಂ., ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್ ಜನಪ್ರತಿನಿಧಿಗಳಿಗೆ ಹಲವು ಪ್ರಶ್ನಾವಳಿಗಳನ್ನು ವೆಬ್‌ಸೈಟ್‌ನಲ್ಲಿ ಕಳುಹಿಸಲಾಗಿತ್ತು. ಅದಕ್ಕೆ ಎರಡು ತಿಂಗಳ ಹಿಂದೆಯೇ ಉತ್ತರ ಬರಬೇಕಾಗಿದ್ದರೂ ಇನ್ನೂ ಬಂದಿಲ್ಲ ಎಂದು ಸಿ.ಜಿ. ಚಿನ್ನಸ್ವಾಮಿ ಹೇಳಿದರು. ಶೀಘ್ರವೇ ಪ್ರಶ್ನೆಗಳಿಗೆ ಆನ್‌ಲೈನ್ ಮೂಲಕ ಉತ್ತರ ಹಾಗೂ ಸಭೆಯ ನಡಾವಳಿ ಬಗ್ಗೆ ಆನ್‌ಲೈನ್ ಮೂಲಕ ಮಾಹಿತಿ ಒದಗಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿಗೆ ಆಯೋಗದ ಅಧ್ಯಕ್ಷರು ಸೂಚನೆ ನೀಡಿದರು.
ಅನುದಾನ ಹೆಚ್ಚಳಕ್ಕೆ ಆಗ್ರಹ
ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳಬೇಕಾದರೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನ ಮಾನ, ಅಧಿಕಾರ ಅವಧಿ ಹೆಚ್ಚಳದಿಂದ ಹೆಚ್ಚಿನದೇನೂ ಸಾಧಿಸಲು ಸಾಧ್ಯವಿಲ್ಲ. ಬದಲಾಗಿ ಎಲ್ಲಾ ಸದಸ್ಯರಿಗೂ ಗೌರವದ ಸ್ಥಾನಮಾನದ ಜತೆಗೆ ಅನುದಾನವನ್ನು ಹೆಚ್ಚಿಸುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಆಸ್ಪದ ನೀಡಬೇಕು ಎಂಬ ಅಭಿಪ್ರಾಯ ಜಿಲ್ಲಾ ಪಂಚಾಯತ್‌ನ ಸದಸ್ಯರಿಂದ ವ್ಯಕ್ತವಾಯಿತು.
ಅನುದಾನ ಹೆಚ್ಚಿಸಲಾಗದಿದ್ದರೆ ತಾಪಂ ವ್ಯವಸ್ಥೆ ತೆಗೆದುಹಾಕಿ!
ಒಂದಾ ತಾಲೂಕು ಪಂಚಾಯತ್‌ಗಳಿಗೆ ಅನುದಾನ ಹೆಚ್ಚಳವಾಗಬೇಕು. ಇಲ್ಲವಾದಲ್ಲಿ ಈ ತಾಲೂಕು ಪಂಚಾಯತ್ ವ್ಯವಸ್ಥೆಯನ್ನೇ ತೆಗೆದುಹಾಕಬೇಕು ಎಂದು ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಬೇಸರಿಸಿದರು. ತಾಲೂಕು ಪಂಚಾಯತ್‌ಗೆ ಅಧ್ಯಕ್ಷರೇ ಮುಖ್ಯಸ್ಥರಾದರೂ, ಯಜಮಾನನಿಗೆ ಯಾವುದೇ ಆದಾಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಜಮಾನ ಯಾವ ರೀತಿ ಕೆಲಸ ಮಾಡಲು ಸಾಧ್ಯ ಎಂದು ಹೇಳಿದ ಅವರು, ತಾಲೂಕು ಪಂಚಾಯತ್‌ಗೆ ಬೀಗ ಹಾಕಿದರೂ ಜನ ದಂಗೆ ಏಳದಂತಹ ಪರಿಸ್ಥಿತಿ ನಮ್ಮದಾಗಿದೆ ಎಂದರು. ಸಭೆಯಲ್ಲಿ ವ್ಯಕ್ತವಾಗುವ ಸಲಹೆ, ಸೂಚನೆ ಹಾಗೂ ಶಿಫಾರಸುಗಳನ್ನು ಕ್ರೋಢೀಕರಿಸಿ ಆಯೋಗ ವರದಿಯೊಂದನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ತಿಳಿಸಿದರು.
ಸಭೆಯಲ್ಲಿ ಆಯೋಗದ ಸದಸ್ಯ ಅಮರನಾಥನ್, ಅಪರ ಕಾರ್ಯದರ್ಶಿ ಹಾಗೂ ಸಮಾಲೋಚಕ ಸುಪ್ರಸನ್ನ, ಜಿ.ಪಂ. ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್, ಜಿ.ಪಂ. ಮುಖ್ಯ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.