×
Ad

ಟಿಪ್ಪುಜಯಂತಿ ಹೆಸರಲ್ಲಿ ಅಮಾಯಕರ ವಿರುದ್ಧ ಕೇಸ್!

Update: 2016-11-08 16:36 IST

ಬಂಟ್ವಾಳ, ನ. 8: ತಾಲೂಕು ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಿಸದೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಮಾತ್ರ ಆಚರಣೆ ಮಾಡುವುದಾದರೆ ತಾಲೂಕು ಮಟ್ಟದಲ್ಲಿ ಟಿಪ್ಪು ಆಚರಣೆಯ ಬಗ್ಗೆ ದಿಢೀರ್ ಸಭೆ ನಡೆಸುವ ಔಚಿತ್ಯವೇನು? ಅಲ್ಲದೆ ಇಲ್ಲಿನ ಅಮಾಯಕ ಯುವಕರ ಸಹಿತ ರೌಡಿಶೀಟರ್‌ಗಳ ಮೇಲೆ 108 ಪ್ರಕರಣ ದಾಖಲಿಸಿ ಕಿರುಕುಳ ನೀಡುವುದು ಯಾಕೆ? ಎಂಬ ಪ್ರಶ್ನೆಗಳು ಟಿಪ್ಪು ಜಯಂತಿ ಪ್ರಯುಕ್ತ ಮಂಗಳವಾರ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಕೇಳಿ ಬಂತು.

ಈ ಪ್ರಶ್ನೆಗಳಿಗೆ ಉತ್ತರಿಸಲು ತಹಶೀಲ್ದಾರ್ ಪುರಂದರ ಹೆಗ್ಡೆ ತಡವರಿಸಿದರು. ತಕ್ಷಣ ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಉತ್ತರಿಸಿ ಸರಕಾರದ ಸೂಚನೆಯಂತೆ ಜಿಲ್ಲಾಡಳಿತದ ನಿರ್ದೇಶನ್ವಯ ಈ ಸಭೆ ಕರೆಯಲಾಗಿದೆ. ಹಾಗೆಯೇ ಕಳೆದ ವರ್ಷ ಟಿಪ್ಪು ಆಚರಣೆಯ ಸಂದರ್ಭದಲ್ಲಿ ಬಂಟ್ವಾಳ ಸೇರಿದಂತೆ ಜಿಲ್ಲೆಯಲ್ಲಿ ನಡೆದ ವಿವಿಧ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸಮಾಜಘಾತುಕ ಕೆಲಸದಲ್ಲಿ ತೊಡಗಿರುವವ ಮೇಲೆ 108 ಪ್ರಕರಣ ದಾಖಲಿಸಿ ತಹಶೀಲ್ದಾರ್ ಬಳಿ ಬಾಂಡ್‌ಗೆ ಸಹಿ ಹಾಕಲು ಹೇಳಿದ್ದೇವೆ. ಇದು ಕೇವಲ ಟಿಪ್ಪು ಜಯಂತಿಯ ಆಚರಣೆಯ ಸಂದರ್ಭದಲ್ಲಿ ಶಾಂತಿ ಕಾಪಾಡಲು ಈ ಪ್ರಕರಣವನ್ನು ದಾಖಲಿಸಲಾಗಿದೆಯೇ ಹೊರತು ಅವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗುವುದಿಲ್ಲ ಎಂದು ಅವರು ಹಿಂದಿನ ಇತಿಹಾಸವನ್ನು ಮರೆತರೆ ಹೊಸ ಸಮಾಜ ಸೃಷ್ಟಿಸಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲಾಡಳಿತ ಆಯೋಜಿಸಿರುವ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡು ಶಾಂತಿ ಸೌಹಾರ್ದತೆಯನ್ನು ಕಾಪಾಡುವಂತೆ ಮನವಿ ಮಾಡಿದರು.

ಬ್ಯಾನರ್, ಮೆರವಣಿಗೆಗೆ ಅವಕಾಶ ಇಲ್ಲ

ಜಿಲ್ಲಾಡಳಿತವೇ ಟಿಪ್ಪು ಜಯಂತಿಯನ್ನು ಆಚರಿಸುವುದರಿಂದ ತಾಲೂಕು ಮಟ್ಟದಲ್ಲಾಗಲಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಾಗಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸರಕಾರದ ಸುತ್ತೋಲೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣಮಟ್ಟದಲ್ಲಿ ಯಾವುದೇ ಸಂಘ ಸಂಸ್ಥೆ ಹಾಗೂ ಮಸೀದಿಗಳಲ್ಲಿ ಆಚರಣೆ ಮಾಡುವುದಿದಲ್ಲಿ ಸ್ಥಳೀಯ ಪಂಚಾಯತ್‌ನಿಂದ ನಿರಾಕ್ಷೇಪಣ ಪತ್ರ ಪಡೆದು ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಸಭೆಗೆ ಮಾಹಿತಿ ನೀಡಿದರು.

ಪುರಸಭಾ ಸದಸ್ಯ ಮುನೀಶ್ ಅಲಿ ಮಾತನಾಡಿ, ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸದ ಅಮಾಯಕ ಯುವಕರ ವಿರುದ್ಧ 108 ಕೇಸ್ ದಾಖಲಿಸಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಾಲೂಕು ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದಿದ್ದರೂ ಅಮಾಯಕ ಯುವಕರ ವಿರುದ್ಧ ಪೊಲೀಸರು ಕೇಸ್ ದಾಖಲಿಸುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹಾರೂನ್ ರಶೀದ್ ಮಾತನಾಡಿ, ಟಿಪ್ಪು ಜಯಂತಿಯನ್ನು ಆಚರಿಸಲು ನಾವು ಸರಕಾರಕ್ಕೆ ಅರ್ಜಿ ಹಾಕಿಲ್ಲ. ಟಿಪ್ಪು ಕೂಡಾ ತನ್ನ ಜಯಂತಿ ಆಚರಿಸಿ ಎಂದು ಬರೆದಿಟ್ಟಿಲ್ಲ. ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಿದ ಮಾತ್ರಕ್ಕೆ ಮುಸ್ಲಿಮರನ್ನು ಗುರಿಯಾಗಿಸಿರುವುದು ಯಾಕೆ? ಎಂದು ಪ್ರಶ್ನಿಸಿದ ಅವರು ಜಮಾಅತ್ ವ್ಯಾಪ್ತಿಯಲ್ಲಿ ಸಾಂಪ್ರದಯಿಕವಾಗಿ ನಡೆಸುವ ಆಚರಣೆಗೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವಿರೋಧ ವ್ಯಕ್ತಪಡಿಸುತ್ತಿರುಗುದಾದರೂ ಯಾಕೆ? ಎಂದು ಪ್ರಶ್ನಿಸಿದರು.

ಪಿಎಫ್‌ಐ ಮುಖಂಡ ಸಲೀಂ ಕುಂಪಣಮಜಲು ಮಾತನಾಡಿ, ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆದು ಗ್ರಾಮೀಣ ಮಟ್ಟದಲ್ಲಿ ಟಿಪ್ಪು ಜಯಂತಿ ಆಚರಿಸಬಹುದು ಹಾಗೂ ಬ್ಯಾನರ್ ಅಳವಡಿಸಬಹುದು ಎಂದು ಕಳೆದ ಸಭೆಯಲ್ಲಿ ಜಿಲ್ಲಾ ಎಸ್ಪಿ ತಿಳಿಸಿದ್ದರಾದರೂ ಇವತ್ತಿನ ಸಭೆಯಲ್ಲಿ ಗ್ರಾಮೀಣ ಮಟ್ಟದಲ್ಲೂ ಆಚರಣೆಗೆ ಅವಕಾಶ ಇಲ್ಲ ಎಂಬುದರಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಏಕ ನಿಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ.ಮಂಜಯ್ಯ ಉಪಸ್ಥಿತರಿದ್ದರು. ಮಾಜಿ ಜಿಪಂ ಸದಸ್ಯ ಎಸ್.ಅಬ್ಬಾಸ್, ಆದಂಕುಂಞಿ, ಧನಂಜಯ ಶೆಟ್ಟಿ, ಗಣಪತಿ ಭಟ್, ಅಝೀಜ್ ಬೊಳ್ಳಾಯಿ, ರವಿರಾಜ್ ಬಿ.ಸಿ.ರೋಡು, ಸಲೀಂ ಕುಂಪಣಮಜಲು, ರಝಾಕ್ ಇರಾ, ಮುಹಮ್ಮದ್ ನಂದಾವರ ಸೇರಿದಂತೆ ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು ಹಾಗೂ ಇಲಾಖಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News