ಸಾಮರಸ್ಯ ಬೆಳೆಸಲು ಎನ್ನೆಸ್ಸೆಸ್ ಸಹಕಾರಿ: ರಶೀದಾ ಬಾನು
ಕೊಣಾಜೆ, ನ.8: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ, ನಾಯಕತ್ವ ಗುಣ, ದೈಹಿಕ ದೃಢತೆಯನ್ನು ಬೆಳೆಸುವುದರೊಂದಿಗೆ ಸಮಾಜದಲ್ಲಿ ಸಾಮರಸ್ಯದ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಬಾನು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇದರ ಆಶ್ರಯದಲ್ಲಿ ಕೊಣಾಜೆ ಪದವು ಶಾಲೆಯಲ್ಲಿ ನಡೆಯುವ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಇಂದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹಲವಾರು ಅವಕಾಶಗಳಿವೆ. ರಾಷ್ಟ್ರೀಯ ಸೇವಾ ಯೋಜನೆಯೂ ನಮ್ಮ ಬೆಳವಣಿಗೆಗೆ ಪೂರಕವಾಗಿದೆ. ಆದ್ದರಿಂದ ಇಂತಹ ಅವಕಾಶಗಳನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಉಪ ಪ್ರಾಂಶುಪಾಲೆ ಡಾ.ಜೆನ್ನಿಸ್ ಮೇರಿ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ, ಉಪಾಧ್ಯಕ್ಷೆ ಲಲಿತಾ ಎಸ್.ರಾವ್, ಮಂಗಳಾ ಸೇವಾ ಟ್ರಸ್ಟ್‌ನ ನಿರ್ದೇಶಕ ಅಬ್ದುಲ್ ನಾಸೀರ್ ಕೆ.ಕೆ., ಕೊಣಾಜೆ ಪಂಚಾಯತ್‌ನ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಶಟ್ಟಿ, ವೇದಾವತಿ ಗಟ್ಟಿ, ಗುಲಾಬಿ, ಶೋಭಾ, ರವೀಂದ್ರ, ಮಾಜಿ ಸದಸ್ಯರಾದ ಹಸನ್ ಕುಂಞಿ, ಯೋಜನಾಧಿಕಾರಿ ರಾಯಪ್ಪನ್, ಶಿಬಿರಾಧಿಕಾರಿ ಬಾಲಕೃಷ್ಣ ಉಪಸ್ಥಿತರಿದ್ದರು.