ಮಂಗಳೂರು ವಿವಿಯಲ್ಲಿ 'ಪ್ರತಿಭೋತ್ಸವ-2016' ಉದ್ಘಾಟನೆ
ಕೊಣಾಜೆ, ನ.8: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣ ಪ್ರತಿಭೋತ್ಸವ-2016'ನ್ನು ಮಂಗಳವಾರ ತುಳು ರಂಗಭೂಮಿ ಕಲಾವಿದ, ಚಿತ್ರನಟ ಭೋಜರಾಜ್ ವಾಮಂಜೂರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಒಂದು ಕಲೆ, ಕಲಾವಿದ ಬೆಳೆಯಬೇಕಾದರೆ ಅವಕಾಶ, ಆಶೀರ್ವಾದ, ಸಹಕಾರ ಬೇಕು. ಶಾಲಾ ಜೀವನದಲ್ಲಿಯೇ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದರೆ ಮಾತ್ರ ಅವರು ಬೆಳೆಯಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.
ಎರಡು ದಶಕಗಳ ಹಿಂದೆ ಬಹಳಷ್ಟು ವಿದ್ಯಾರ್ಥಿಗಳಲ್ಲಿ ವಿಶೇಷವಾದ ಪ್ರತಿಭೆಗಳಿದ್ದರೂ ಅನಾವರಣ ಮಾಡುವುದಕ್ಕೆ ಅವಕಾಶಗಳ ಕೊರತೆ ಇತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿ, ಪ್ರತಿಭೋತ್ಸವ ಮೂಲಕ ಪ್ರತಿಭೆಯನ್ನು ಹೊರತರಲು ಸಾಧ್ಯ ಎಂದರು.
ಈಗಿನ ಕಾಲಘಟ್ಟದಲ್ಲಿ ನಮಗೆ ಭಾಷಾ ಜ್ಞಾನ ಅಗತ್ಯ. ಕೆಲವು ಭಾಗದಲ್ಲಿ ಭಾಷಾ ಜ್ಞಾನ ಇಲ್ಲದಿದ್ದಾಗ ಕೆಲವು ಸಂದರ್ಭ ನಾವು ಅವಮಾನ ಎದುರಿಸಬೇಕಾಗುತ್ತದೆ. ವಿದ್ಯೆ ಒಮ್ಮೆ ಒಲಿದರೆ ಅದು ನಮ್ಮ ಶಾಶ್ವತ ಆಸ್ತಿಯಾಗಿ ಉಳಿಯುತ್ತದೆ. ಕಲಾವಿದನಾಗಿ ಆತುರ ಸಲ್ಲದು. ಗುರುಹಿರಿಯರು, ಪೋಷಕರು, ಕಲಾಭಿಮಾನಿಗಳ ಆಶೀರ್ವಾದದ ಜೊತೆಗೆ ಬದುಕಿನುದ್ದಕ್ಕೂ ತಾಳ್ಮೆಯಿಂದ ಮುನ್ನಡೆದಾಗ ಯಶಸ್ಸು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬೇಕಾದರೆ ಎಲ್ಲ ವಿಧದ ಶ್ರಮ ಬೇಕು, ಪ್ರತ್ನ ಸಾಧನೆ ಬೇಕು. ಯಾವುದೇ ಕಾರಣಕ್ಕೂ ವಿಪರೀತ ವಿಶ್ವಾಸ ಇಟ್ಟುಕೊಳ್ಳಬಾರದು ಎಂದರು.
ವಿವಿಯ ಕುಲಸಚಿವ ಪ್ರೊ. ಕೆ. ಎಂ. ಲೋಕೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿ ಪ್ರತಿಭೆ ಎಂಬುದು ಸುಪ್ತವಾಗಿರುತ್ತದೆ. ಕೆಲವೊಮ್ಮೆ ಹೊರಬರುವುದಿಲ್ಲ. ಮತ್ತೆ ಕೆಲವೊಮ್ಮೆ ಅಲ್ಲೇ ಸತ್ತು ಹೋಗುತ್ತದೆ. ಡಾ. ರಾಜ್‌ಕುಮಾರ್ ಅವರಂತ ಮೇರುನಟನಿಗೆ ಯಾವುದೇ ತರಬೇತಿ ಇರಲಿಲ್ಲ. ಹಾಗಿದ್ದರೂ ಚಿತ್ರರಂಗವನ್ನೇ ಆಳಿದರು ಎಂದು ಹೇಳಿದರು.
ಆಶಾ ಭೋಸ್ಲೆ, ಭೀಮಸೇನ್ ಜೋಷಿ, ಎಸ್.ಪಿ.ಬಿ., ಪಿ.ಬಿ. ಶ್ರೀನಿವಾಸ್‌ರಂತಹ ಕಲಾವಿದರು ಪರಿಚಯವಾದದ್ದೇ ಆಕಸ್ಮಿಕ. ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಹೆದರುತ್ತಿದ್ದರು. ಪ್ರಾಣೇಶ್‌ರಂತಹ ಹಾಸ್ಯ ಕಲಾವಿದರು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಕಾರಣ ಅವರಲ್ಲಿದ್ದ ಪ್ರತಿಭೆ, ಅಪ್ರತಿಮ ಶ್ರಮ. ಮುಂದಕ್ಕೆ ಅದೇ ತಮ್ಮ ಅನ್ನದ ಪಾತ್ರೆಯಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭೋಜರಾಜ್ ವಾಮಂಜೂರು ಅವರನ್ನು ಸನ್ಮಾನಿಸಲಾಯಿತು.
ವಿ.ವಿ.ಯ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ವಿ.ವಿ.ಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೆೊ. ಬಿ. ಉದಯ ಸ್ವಾಗತಿಸಿದರು.
ವಿದ್ಯಾರ್ಥಿ ಕೌನ್ಸಿಲ್‌ನ ಅಧ್ಯಕ್ಷ ದಿವಾಕರ್, ಸುನಿಲ್ ಎಂ., ಅಶೋಕ್ ಹಾಗೂ ಶ್ಯಾಂ ಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕೌನ್ಸಿಲ್‌ನ ಸಾಂಸ್ಕೃತಿಕ ಕಾರ್ಯದರ್ಶಿ ಸುಕ್ಷಿತಾ ವಂದಿಸಿದರು.