ನೂರಾರು ಮಕ್ಕಳು ಬಲಿಯಾಗುತ್ತಿರುವಾಗ ನಿಮಗೆ ರಾತ್ರಿ ನಿದ್ರೆ ಹೇಗೆ ಬರುತ್ತದೆ ?
ಡಮಾಸ್ಕಸ್, ನ. 8: ಸಿರಿಯದಲ್ಲಿ ಪ್ರತಿ ದಿನ ಸಾಯುತ್ತಿರುವ ಮಕ್ಕಳ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ, ತಾನು ಚೆನ್ನಾಗಿಯೇ ನಿದ್ರಿಸುತ್ತೇನೆ ಎಂದು ಹೇಳಿದೆ ಎಂದು ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸಾದ್ ನಗುತ್ತಾ ಹೇಳಿದ್ದಾರೆ.
ದೇಶದಲ್ಲಿ ಸಂಭವಿಸಿರುವ ಲಕ್ಷಾಂತರ ಜನರ ಸಾವು ‘ಭಯೋತ್ಪಾದಕರು ತಪ್ಪು’ ಎಂದೂ ಅವರು ಹೇಳಿದರು. ‘‘ನಾವು ಯುದ್ಧದ ಬಗ್ಗೆ ಮಾತನಾಡುತ್ತಿದ್ದೇವೆ, ಸೇವೆಯ ಬಗ್ಗೆ ಅಲ್ಲ’’ ಎಂದು ಅವರು ಹೇಳುತ್ತಾರೆ.
ಅಸಾದ್‌ರನ್ನು ಇತ್ತೀಚೆಗೆ ‘ದ ಸಂಡೇ ಟೈಮ್ಸ್’ ಸಂದರ್ಶನ ನಡೆಸಿತು. ಅಲೆಪ್ಪೊ ಮತ್ತು ಸಿರಿಯದ ಇತರ ಭಾಗಗಳಲ್ಲಿ ಮಕ್ಕಳು ಸಾಯುತ್ತಿರುವಾಗ ರಾತ್ರಿಯಲ್ಲಿ ನೀವು ನಿದ್ದೆ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಅದಕ್ಕೆ ಅವರು ನಗುತ್ತಾ ಉತ್ತರಿಸಿದರು: ‘‘ಆ ಪ್ರಶ್ನೆಯ ಉತ್ತರ ನನಗೆ ಗೊತ್ತು. ನಾನು ನಿಯಮಿತವಾಗಿ ಮಲಗುತ್ತೇನೆ. ನಾನು ಸಾಮಾನ್ಯ ರೀತಿಯಲ್ಲಿ ಮಲಗುತ್ತೇನೆ, ಕೆಲಸ ಮಾಡುತ್ತೇನೆ ಮತ್ತು ತಿನ್ನುತ್ತೇನೆ ಹಾಗೂ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತೇನೆ’’.
ಈ ಎಲ್ಲ ಹತ್ಯೆಗಳ ಬಗ್ಗೆ ನಿಮಗೆ ಏನನಿಸುತ್ತದೆ ಎಂಬ ಪ್ರಶ್ನೆಗೂ ಅವರು ಅವರು ತಲೆಯಲ್ಲಾಡಿಸಿದರು. ‘‘ಅದು ಭಯೋತ್ಪಾದಕರ ತಪ್ಪು. ನಾವು ಯುದ್ಧದ ಬಗ್ಗೆ ಮಾತನಾಡುತ್ತಿದ್ದೇವೆ, ಸೇವೆಯ ಬಗ್ಗೆ ಅಲ್ಲ’’ ಎಂದರು.
‘‘ಯುದ್ಧದಲ್ಲಿ ಅಮಾಯಕರು ಗಾಯಗೊಳ್ಳುತ್ತಾರೆ ಅಥವಾ ಸಾಯುತ್ತಾರೆ. ನಾವು ಏನು ಮಾಡಬಹುದು? ನಮ್ಮಿಂದಾಗುವುದನ್ನು ನಾವು ಮಾಡುತ್ತೇವೆ. ಭಯೋತ್ಪಾದಕರು ಈಗಲೂ ಅಲೆಪ್ಪೊದಲ್ಲಿ ಇದ್ದಾರೆ ಹಾಗೂ ನಾಗರಿಕರನ್ನು ಮಾನವಗುರಾಣಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’’ ಎಂದರು.
‘‘ನಾವು ಸುಮ್ಮನೆ ನಿಂತು ‘ದಯವಿಟ್ಟು ನಗರವನ್ನು ನಾಶಮಾಡಬೇಡಿ’ ಎಂದು ಹೇಳಲು ಸಾಧ್ಯವಿಲ್ಲ. ನಗರಕ್ಕಿಂತಲೂ ಮುಖ್ಯವಾದದ್ದು ಜನರು. ಹಾಗಾಗಿ, ಜನರಿಗಾಗಿ ನಾವು ನಮ್ಮಿಂದ ಸಾಧ್ಯವಾಗುವಷ್ಟನ್ನು ಮಾಡಬೇಕು’’ ಎಂದರು.