×
Ad

ಟಿಪ್ಪು ಸುಲ್ತಾನ್ ಅಸಹಿಷ್ಣು ಅಲ್ಲ: ಪ್ರೊ. ಕೃಷ್ಣಮೂರ್ತಿ

Update: 2016-11-08 18:52 IST

ಮಂಗಳೂರು, ನ.8: ವಸಾಹತುಶಾಹಿಯ ವಿರುದ್ಧ ಸಿಡಿದೆದ್ದಿದ್ದ ಟಿಪ್ಪು ಸುಲ್ತಾನ್ ಎಂದೂ ಅಸಹಿಷ್ಣು ಆಗಿರಲಿಲ್ಲ. ಆತ ಸದಾ ಸಹಿಷ್ಣು ಆಗಿದ್ದ ಮತ್ತು ರಾಜಧರ್ಮ ಪಾಲಿಸುತ್ತಿದ್ದ ಎಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕ ಪ್ರೊ. ಕೃಷ್ಣಮೂರ್ತಿ ಹೇಳಿದರು.

ಟಿಪ್ಪು ಸುಲ್ತಾನ್ ಇತಿಹಾಸ ಸಂಶೋಧನಾ ಸಮಿತಿ ವತಿಯಿಂದ ಮಂಗಳವಾರ ನಗರದ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಬಾರ್ಕೂರು ಉದಯ ರಚಿಸಿದ ‘ಹೈದರಾಲಿ-ಟಿಪ್ಪು: ಇತಿಹಾಸ ಕಥನ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತನ್ನ ರಾಜ್ಯದ ದೇವಾಲಯಗಳಿಗೆ ನೀಡಿದ ಕೊಡುಗೆಗಳ ಬಗ್ಗೆ ದಾಖಲೆಗಳಿದ್ದರೂ ಅದನ್ನು ಮರೆಮಾಚಲಾಗುತ್ತಿದೆ. ಸಾಮ್ರಾಜ್ಯ ವಿಸ್ತರಣೆ ಸಂದರ್ಭ ದೇವಾಲಯಗಳನ್ನು ಕೆಡವಿರಬಹುದು. ಅದು ಧಾರ್ಮಿಕ ಅಸಹಿಷ್ಣುತೆಯಿಂದ ಅಲ್ಲ ಎಂಬುದನ್ನು ತಿಳಿಯುವ ಅಗತ್ಯವಿದೆ. ಧರ್ಮ ಪ್ರಚಾರವೇ ಉದ್ದೇಶವಾಗಿದ್ದರೆ ಆತ ಹೈದರಾಬಾದ್‌ನ ನಿಜಾಮನ ವಿರುದ್ಧ ಸೆಣಸುತ್ತಿರಲಿಲ್ಲ. ಬ್ರಿಟಿಷರ ಬೆಂಗಾವಲಾಗಿ ಯಾರೆಲ್ಲ ನಿಂತಿದ್ದರೋ ಅವರ ವಿರುದ್ಧ ಟಿಪ್ಪು ದಂಡೆತ್ತಿ ಹೋಗುತ್ತಿದ್ದ ಸತ್ಯಾಂಶವನ್ನು ಮರೆಮಾಚಬಾರದು ಎಂದು ಪ್ರೊ. ಕೃಷ್ಣಮೂರ್ತಿ ಹೇಳಿದರು.

ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಜೆಡಿಎಸ್ ದ.ಕ.ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ, ಜಮೀಯ್ಯತಯಲ್ ಫಲಾಹ್ ದ.ಕ.-ಉಡುಪಿ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಅಸ್ಲಂ ಭಾಗವಹಿಸಿದ್ದರು.

ಸಮಿತಿಯ ಅಧ್ಯಕ್ಷ ಪಿ.ಎಚ್.ಎಂ. ರಫೀಕ್ ಕಾಟಿಪಳ್ಳ ಸ್ವಾಗತಿಸಿದರು. ಅಕ್ಬರ್ ಮದನಿ ಕಿರಾಅತ್ ಪಠಿಸಿದರು. ಜೆ. ಹುಸೈನ್ ಪ್ರಾಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಇ.ಕೆ.ಹುಸೈನ್ ಕೂಳೂರು ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಬ್ರಿಟಿಷ್ ಚರಿತ್ರೆಕಾರರ ದಾಖಲೆಯಾಗಿಟ್ಟುಕೊಂಡು ಇತಿಹಾಸಕ್ಕೆ ಅಪಚಾರ ಮಾಡುವುದು ಸರಿಯಲ್ಲ. ಬ್ರಿಟಿಷರ ಒಡೆದು ಆಳುವ ನೀತಿಯ ಫಲವಾಗಿ ಟಿಪ್ಪು ಮತಾಂಧನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಅದನ್ನು ಮರು ಮಂಡನೆ ಮಾಡುವ ಭರಾಟೆಯಲ್ಲಿ ಟಿಪ್ಪು ಇತಿಹಾಸಕ್ಕೆ ಅಪಚಾರ ಎಸಗಲಾಗುತ್ತದೆ. ಇತಿಹಾಸ ಎಂದೂ ಕಪೋಲಕಲ್ಪಿತ ಕಥನ ಆಗಿರಬಾರದು. ತನ್ನ 17 ವರ್ಷದ ಅಧಿಕಾರವಧಿಯಲ್ಲಿ 8 ಸಾವಿರ ದೇವಾಲಯಗಳನ್ನು ಕೆಡವಿದ್ದಾನೆ ಎಂದು ಹೇಳಲಾಗುತ್ತದೆ. ಅಂದರೆ ಆತ ದಿನಕ್ಕೊಂದು ದೇವಾಲಯಗಳನ್ನು ಕೆಡವಿದಂತಾಗುತ್ತದೆ. ಸೂಕ್ತ ಸೌಕರ್ಯವೇ ಇಲ್ಲದ ಆ ಕಾಲದಲ್ಲಿ ಅದೆಲ್ಲಾ ಸಾಧ್ಯವೇ?.

ಪ್ರೊ. ಬಾರ್ಕೂರು ಉದಯ, ಕೃತಿಕರ್ತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News