ಮುಂದಿನ ಮಾರ್ಚ್‌ನಲ್ಲಿ ಸಾರ್ಕ್ ಉಪಗ್ರಹ ಉಡಾವಣೆ: ಇಸ್ರೊ

Update: 2016-11-08 14:08 GMT

ತಿರುವನಂತಪುರ, ನ.8: ಸಾರ್ಕ್ ಸದಸ್ಯರ ಉಪಯೋಗಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ, ಭಾರತದ ಮಹತ್ವಾಕಾಂಕ್ಷಿ ದಕ್ಷಿಣ ಏಶ್ಯ ಉಪಗ್ರಹವನ್ನು ಮುಂದಿನ ವರ್ಷ ಮಾರ್ಚ್‌ನಲ್ಲಿ ಉಡಾವಣೆ ಮಾಡಲಾಗುವುದೆಂದು ಇಸ್ರೊದ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಉಪಗ್ರಹವನ್ನು ಈ ವರ್ಷ ಡಿಸೆಂಬರ್‌ನಲ್ಲೇ ಹಾರಿಸುವ ಯೋಜನೆ ಮೊದಲಿತ್ತು.

ತಿರುವನಂತಪುರದಲ್ಲಿ ನಡೆದ ಸಮಾರಂಭವೊಂದರ ನೇಫಥ್ಯದಲ್ಲಿ ಕಿರಣ್ ಕುಮಾರ್, ಸಾರ್ಕ್ ಉಪಗ್ರಹವನ್ನು ಮುಂದಿನ ಮಾರ್ಚ್‌ನಲ್ಲಿ ಉಡಾಯಿಸಲಾಗುವುದೆಂದರು.

ಪ್ರಾದೇಶಿಕ ಗುಂಪಿನ ಸದಸ್ಯ ರಾಷ್ಟ್ರಗಳಿಗೆ ದೂರ ಸಂಪರ್ಕ ಹಾಗೂ ಟೆಲಿ-ಔಷಧ ಸಹಿತ ವಿವಿಧ ಕ್ಷೇತ್ರಗಳಲ್ಲಿ ಲಾಭವಾಗುವಂತೆ, 2014ರ ನವೆಂಬರ್‌ನಲ್ಲಿ ನೇಪಾಳದಲ್ಲಿ ನಡೆದಿದ್ದ ಸಾರ್ಕ್ ಸಮ್ಮೇಳನ ವೇಳೆ ಪ್ರಧಾನಿ ಮೋದಿ ಒಂದು ಕೊಡುಗೆಯಾಗಿ ಸಾರ್ಕ್ ಉಪಗ್ರಹವೊಂದರ ಉಡಾವಣೆಯನ್ನು ಘೋಷಿಸಿದ್ದರು.

ಆದರೆ, ಪಾಕಿಸ್ತಾನವು ಈ ಯೋಜನೆಯಿಂದ ಹೊರಗುಳಿದಿರುವ ಕಾರಣ ಈಗ ಅದನ್ನು ದಕ್ಷಿಣ ಏಶ್ಯ ಉಪಗ್ರಹವೆಂದು ಕರೆಯಲಾಗುತ್ತಿದೆ.
ಈ ಉಪಗ್ರಹದ ರೂಪು-ರೇಖೆಯನ್ನು ಅಂತಿಮಗೊಳಿಸಲು ಭಾರತವು ಇತರ ಸಾರ್ಕ್ ರಾಷ್ಟ್ರಗಳ ತಜ್ಞರೊಂದಿಗೆ ಸಮಾಲೋಚನೆ ನಡೆಸಿತ್ತು.
ಡಿಸೆಂಬರ್‌ನಲ್ಲಿ ಉಡಾಯಿಸುವ ನಿರೀಕ್ಷೆಯಿರುವ ಜಿಎಸ್‌ಎಲ್‌ವಿ ಮಾರ್ಕ್-3ರ ಸಿದ್ಧತೆ ಭರದಿಂದ ಸಾಗುತ್ತಿದೆಯೆಂದು ಇಸ್ರೊ ಅಧ್ಯಕ್ಷರು ತಿಳಿಸಿದರು.
ಉಡಾವಣೆಗಾಗಿ ಶ್ರೀಹರಿಕೋಟಾದಲ್ಲಿ ತಾವು ಜೋಡಣೆಯ ಕಾರ್ಯವನ್ನು ಆರಂಭಿಸಿದ್ದೇವೆ. ಅದನ್ನು ಆದಷ್ಟು ಶೀಘ್ರ ಸಾಧ್ಯವಾಗಿಸಲು ತಾವು ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ ಅಂತ್ಯದೊಳಗೆ ಜಿಎಸ್‌ಎಲ್‌ವಿ ಮಾರ್ಕ್-3ಯನ್ನು ಉಡಾಯಿಸಲು ಗುರಿಯಿರಿಸಿಕೊಂಡಿದ್ದೇವೆಂದು ಅವರು ಹೇಳಿದರು.
ಸುಂಆರು 4 ಟನ್ ತೂಕದ ಉಪಗ್ರಹ ಉಡಾವಣೆ ಸಾಧ್ಯವಾಗುವುದರಿಂದ ದೇಶಕ್ಕೆ ಸಹಾಯವಾಗುತ್ತದೆ. ಇದರಿಂದಾಗಿ ರಾಕೆಟ್ ಕಾರ್ಯಕ್ರಮ ಇಸ್ರೊಗೆ ನಿರ್ಣಾಯಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News