×
Ad

ವಾರಾಹಿಯಿಂದ ಉಡುಪಿಗೆ ಶಾಶ್ವತ ಕುಡಿಯುವ ನೀರು

Update: 2016-11-08 22:01 IST

ಉಡುಪಿ, ನ.8: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲೆಯ ಎಲ್ಲ ನೀರಾವರಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಸಂಭವನೀಯ ವರದಿ ಸಿದ್ಧಪಡಿಸಿ, ಪ್ರತ್ಯೇಕ ಸಭೆಯನ್ನು ನಡೆಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮಣಿಪಾಲದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಯೋಜನೆ, ಕುಡ್ಸೆಂಪ್ ಯೋಜನೆ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಯೋಜನೆ ಹಾಗೂ ವಾರಾಹಿಯನ್ನೊಳಗೊಂಡಂತೆ ನೀರಾವರಿ ಸಂಬಂಧ ಎಲ್ಲ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ಸಂಭವನೀಯ ವರದಿ ಸಿದ್ಧಪಡಿಸಬೇಕೆಂದು ಅವರು ಸೂಚನೆ ನೀಡಿದರು.

ವಾರಾಹಿಯಿಂದ ಉಡುಪಿ ತನಕ ಕುಡಿಯುವ ನೀರು ಪೂರೈಸಲು ಯೋಜನೆಗೆ ಸಾಮರ್ಥ್ಯವಿದ್ದು ಇದನ್ನು ಬಳಸಿಕೊಳ್ಳಬಹುದು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರ ಗಮನಸೆಳೆದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ದನಿಗೂಡಿಸಿದರು. ಯೋಜನೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನಿಗದಿಯಾದಷ್ಟು ಕೃಷಿ ಭೂಮಿ ಸದ್ಯ ಇಲ್ಲದಿರುವುದರಿಂದ ಉಳಿದಿರುವ ರೈತರಿಗೆಲ್ಲ ನೀರು ಹಂಚಿ ಕುಡಿಯಲು ನೀರು ಸಿಗಬಹುದು ಎಂದು ಪ್ರತಾಪ್‌ಚಂದ್ರ ಶೆಟ್ಟಿ ಹೇಳಿದರು.

ಕೃಷಿ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದ ಯೋಜನೆಗಳ ಅನು ಮೋದನೆ ಕುರಿತು ರೂಪಿಸಲಾದ ಯೋಜನೆಗಳ ಪ್ರತಿಯನ್ನು ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿರುವ ಕೊರಗ ಸಮುದಾಯದವರಿಗೆ ವೈದ್ಯಕೀಯ ಮರುವೆಚ್ಚ ಪಾವತಿಗಾಗಿ ಪ್ರಸ್ತಾವನೆಯನ್ನು ತಕ್ಷಣವೇ ಸಲ್ಲಿಸಿ ಎಂದು ಅವರು ಐಟಿಡಿಪಿ ಅಧಿಕಾರಿಗಳಿಗೆ ತಿಳಿಸಿದರು. ಭತ್ತಕ್ಕೆ ಬೆಂಬಲ ಬೆಲೆಯನ್ನು ಕೂಡಲೇ ನೀಡುವಂತೆ ಸಚಿವರು ಕಾರ್ಯದರ್ಶಿಗಳಿಗೆ ತಿಳಿಸಿದರು.

ಗ್ರಾಮೀಣ ವಸತಿ ಯೋಜನೆಯಡಿ 3638 ಮನೆ ನಿರ್ಮಾಣ ವಾರ್ಷಿಕ ಗುರಿ ನಿಗದಿಯಾಗಿದ್ದು, 1947 ಮನೆಗಳು ಸಂಪೂರ್ಣಗೊಂಡಿವೆ. 1691 ಇನ್ನೂ ನಿರ್ಮಾಣ ಆರಂಭವಾಗಿಲ್ಲ. ಕಾರ್ಕಳ ತಾಲೂಕಿಗೆ 774, ಕುಂದಾ ಪುರ 1547, ಉಡುಪಿ 1317 ಮನೆಗಳು ಮಂಜೂರಾಗಿವೆ ಎಂದು ಯೋಜನಾ ನಿರ್ದೇಶಕಿ ನಯನಾ ಮಾಹಿತಿ ನೀಡಿದರು. ವಸತಿ ಯೋಜನೆ ಗುರಿಯನ್ನು ಸಮಯಮಿತಿಯೊಳಗೆ ಸಂಪೂರ್ಣಗೊಳಿಸಲು ಕಾರ್ಯದರ್ಶಿ ಗಳು ಸೂಚಿಸಿದರು.

ಪರ್ಮಿಟ್ ಪಡೆದ ಪ್ರದೇಶಗಳಿಗೆ ಖಾಸಗಿ ಬಸ್‌ಗಳು ಓಡಾಟ ನಡೆಸದಿ ದ್ದರೆ ಪರ್ಮಿಟ್ ರದ್ದುಗೊಳಿಸಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಓಡಿಸಲು ಕ್ರಮಕೈಗೊಳ್ಳುವಂತೆ ಸಚಿವರು ಆರ್‌ಟಿಒ ಹಾಗೂ ಕೆಎಸ್‌ಆರ್‌ಟಿಸಿ ಯವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ವೆಂಕಟೇಶ್, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News