500, 1,000 ರೂ. ಕರೆನ್ಸಿ ನಿಷೇಧ ಜಾರಿ ಎಫೆಕ್ಟ್: ಪೆಟ್ರೋಲ್ ಬಂಕ್‌ನಲ್ಲಿ ಮಾತಿನ ಚಕಮಕಿ
ಮಂಗಳೂರು, ನ.8: ಕೇಂದ್ರ ಸರಕಾರವು ರಾತ್ರಿಯಿಂದಲೇ ಜಾರಿಯಾಗುವಂತೆ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಹಾಗೂ ಬುಧವಾರ ಮತ್ತು ಗುರುವಾರ ಎಟಿಎಂಗಳ ಬಂದ್‌ಗೆ ಆದೇಶ ನೀಡಿರುವುದರಿಂದ ಇಂದು ರಾತ್ರಿಯಿಂದಲೇ ನಗರದ ವಿವಿಧ ಬ್ಯಾಂಕ್‌ಗಳ ಎಟಿಎಂ ಕೇಂದ್ರಗಳ ಎದುರು ಗ್ರಾಹಕರು ತಮ್ಮ ಹಣವನ್ನು ಹಿಂಪಡೆಯಲು ಕ್ಯೂನಲ್ಲಿ ನಿಂತಿರುವ ದೃಶ್ಯ ಕಂಡುಬಂದವು.
ಕೆಲವು ಎಟಿಎಂಗಳಲ್ಲಿ ಗ್ರಾಹಕರು ಹಣ ಹಿಂಪಡೆಯಲು ಯಶಸ್ವಿಯಾದರೆ, ಮತ್ತೆ ಕೆಲವು ಗ್ರಾಹಕರು ಹಣ ಪಡೆಯಲು ಸಾಧ್ಯವಾಗದೆ, ನಿರಾಶೆಯಿಂದ ಹಿಂದಿರುಗಿದ ಘಟನೆಗಳು ನಡೆದವು. ನಗರದ ಕೆಲವು ಎಟಿಎಂ ಕೇಂದ್ರಗಳಲ್ಲಿ ಸರ್ವರ್ ಸರಿ ಇಲ್ಲದಿದ್ದುದರಿಂದ ಎಟಿಎಂಗಳು ಕಾರ್ಯ ನಿರ್ವಹಿಸದೆ ಗ್ರಾಹಕರು ಬರಿಗೈಯಲ್ಲಿ ಹಿಂದಿರುಗಿದ್ದು ಕಂಡು ಬಂತು. ನಗರ ಸ್ಟೇಟ್‌ಬಾಂ್ಯಕ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ತುಂಬಿಸಲು ಬಂದ ಗ್ರಾಹಕನೋರ್ವ ಬಂಕ್‌ನ ಸಿಬ್ಬಂದಿಯೊಂದಿಗೆ ಜಗಳವಾಡಿ ಮಾತಿನಚಕಮಕಿ ನಡೆದಿದೆ.
ವಾಹನಕ್ಕೆ ಪೆಟ್ರೋಲ್ ತುಂಬಿಸಲೆಂದು ಬಂದಿದ್ದ ಗ್ರಾಹಕ ಸಿಬ್ಬಂದಿಗೆ 500ರ ನೋಟು ಕೊಟ್ಟು 100 ರೂ. ಪೆಟ್ರೋಲ್ ಹಾಕುವಂತೆ ಕೇಳಿಕೊಂಡಿದ್ದಾನೆ. ಆದರೆ, ಬಂಕ್‌ನ ಸಿಬ್ಬಂದಿ 100 ರೂ.ನೋಟು ನೀಡುವಂತೆ ಇಲ್ಲದಿದ್ದರೆ, 500 ರೂ. ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ. ಇದರಿಂದ ಕುಪಿತಗೊಂಡ ಗ್ರಾಹಕ ಆತನೊಂದಿಗೆ ವಾಗ್ವಾದಕ್ಕಿಳಿದಿರುವ ಘಟನೆ ರಾತ್ರಿ ನಡೆದಿದೆ.