ಸಿಐಟಿಯು ಎರ್ನಾಕುಲಂ ಜಿಲ್ಲಾಧ್ಯಕ್ಷನಿಗೆ ಇರಿತ
Update: 2016-11-09 12:23 IST
ಕೊಚ್ಚಿ, ನ. 9: ಸಿಐಟಿಯು ಎರ್ನಾಕುಲಂ ಜಿಲ್ಲಾಧ್ಯಕ್ಷ ಕೆ.ಎನ್. ಗೋಪಿನಾಥ ಎಂಬವರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಕೂಡಲೇ ಗೋಪಿನಾಥ್‌ರನ್ನು ಕೊಚ್ಚಿ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಲಾರಿವಟ್ಟದಲ್ಲಿ ಆಟೊ, ಟ್ಯಾಕ್ಸಿ ಚಾಲಕರು ಉಬರ್ ಟ್ಯಾಕ್ಸಿ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ಘಾಟಿಸಿದ ಬಳಿಕ ಬೈಕ್ ಹತ್ತುತ್ತಿದ್ದ ವೇಳೆ ಗೋಪಿನಾಥ್ ಕೊರಳಿಗೆ ಇರಿಯಲಾಗಿದೆ. ಕೊರಳಿನ ನರವೊಂದಕ್ಕೆ ಹಾನಿಯಾಗಿದ್ದರೂ ಗಂಭೀರ ಪ್ರಮಾಣದ ಹಾನಿಯಲ್ಲ ಎಂದು ವೈದ್ಯರು ಹೇಳಿದ್ದಾರೆ.
ಗೋಪಿನಾಥ್‌ರನ್ನು ಇರಿದಿರುವ ವ್ಯಕ್ತಿಯನ್ನು ವಡಗರ ವೈಶಾಖದ ಉಣ್ಣಿಕೃಷ್ಣನ್ ಎಂದು ಗುರುತಿಸಲಾಗಿದ್ದು,ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆ ಕಾರಣವೇನೆಂದು ಪಾಲಾರವಟ್ಟಂ ಪೊಲೀಸರು ಆರೋಪಿಯನ್ನು ಪ್ರಶ್ನಿಸುತ್ತಿದ್ದಾರೆ. ಗೋಪಿನಾಥ್ ಮತ್ತು ಉಣ್ಣಿಕೃಷ್ಣನ್ ಪರಸ್ಪರ ಪರಿಚಯವಿದ್ದ ವ್ಯಕ್ತಿಗಳಲ್ಲ ಎಂದು ವರದಿ ತಿಳಿಸಿದೆ.