×
Ad

ಶಕ್ತಿನಗರ: ಶಕ್ತಿ ವಸತಿಯುತ ವಿದ್ಯಾಲಯ-ಪ.ಪೂ. ಕಾಲೇಜಿಗೆ ಶಿಲಾನ್ಯಾಸ

Update: 2016-11-09 15:48 IST

ಮಂಗಳೂರು, ನ.9: ಗುಣಮಟ್ಟದ ಶಿಕ್ಷಣದ ನೀಡುವ ಜವಾಬ್ದಾರಿಯುತ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಎನ್.ವಿನಯ ಹೆಗ್ಡೆ ಅಭಿಪ್ರಾಯಿಸಿದರು.
ಶಕ್ತಿ ಎಜುಕೇಶನ್ ಟ್ರಸ್ಟ್ ವತಿಯಿಂದ ಆರಂಭವಾಗಲಿರುವ ಶಕ್ತಿ ನಗರದ ಕ್ಲಾಸಿಕ್ ವಿಲೇಜ್‌ನಲ್ಲಿ ಶಕ್ತಿ ವಸತಿ ಸಹಿತ ವಿದ್ಯಾಲಯಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಬುಧವಾರ ನೆರವೇರಿಸಿ ಅವರು ಮಾತನಾಡುತ್ತಿದ್ದರು.
 ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುವ ಜವಾಬ್ದಾರಿಯುತ ಶಿಕ್ಷಕರನ್ನು ಹೆಚ್ಚಿನ ಪೋಷಕರು ನಿರೀಕ್ಷಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿರುವವರು ಹೆಚ್ಚಿನ ಕಾಳಜಿಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಕ್ತಿ ಶಿಕ್ಷಣ ಸಂಸ್ಥೆ ಉತ್ತಮವಾಗಿ ಆರಂಭಗೊಂಡು ಯಶಸ್ಸನ್ನು ಕಾಣಲಿ ಎಂದು ಅವರು ಶುಭ ಹಾರೈಸಿದರು.
   ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಿಂದುಳಿದಿದ್ದ ಶಕ್ತಿನಗರ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಕೆ.ಸಿ.ನಾಯ್ಕ್ ಶ್ರಮ ವಹಿಸಿದ್ದಾರೆ. ಶಕ್ತಿನಗರದ ಶ್ರೀಗೋಪಾಲಕೃಷ್ಣ ದೇವಾಲಯದ ನಿರ್ಮಾಣದ ಮೂಲಕ ಜನರನ್ನು ಧಾರ್ಮಿಕ ಹಾದಿಯ ಮೂಲಕ ಉತ್ತಮ ದಾರಿಯಲ್ಲಿ ಸಾಗುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
  ವಸತಿ ನಿಲಯ ಕಟ್ಟಡಕ್ಕೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವಸತಿಯುತ ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಶಕ್ತಿ ಶಿಕ್ಷಣ ಸಂಸ್ಥೆ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಶಿಕ್ಷಣ ಒಂದು ವ್ಯಾಪಾರ ವ್ಯವಹಾರ ಆಗದೆ, ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.
  ಶಕ್ತಿ ಜುಕೇಶನ್‌ಟ್ರಸ್ಟ್‌ನ ಆಡಳಿತ ನಿರ್ದೇಶಕ ಕೆ.ಸಿ.ನಾಯ್ಕ್ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಹಾಗೂ ಮಾರ್ಗದರ್ಶನ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.

ಸಂಸ್ಥೆಯ ಸಲಹೆಗಾರ ವಿ.ಕೆ.ತಾಳಿತ್ತಾಯ ಮಾತನಾಡಿ, ಶಕ್ತಿ ವಸತಿಯು ವಿದ್ಯಾಲಯ 1ರಿಂದ 10ನೆ ತರತಿಯವರೆಗೆ ಕೇಂದ್ರೀಯ ವಿದ್ಯಾಲಯದ ಪಠ್ಯಕ್ರಮವನ್ನು ಹೊಂದಿರುತ್ತದೆ. ಪದವಿ ಪೂರ್ವ ತರಗತಿಗಳಿಗೆ ರಾಜ್ಯ ಪಿ.ಯು. ಬೋರ್ಡ್ ಪಠ್ಯ ಕ್ರಮವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. 

ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್, ಮಹಾನಗರ ಪಾಲಿಕೆ ಸದಸ್ಯೆ ಅಖಿಲಾ ಆಳ್ವ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಟ್ರಸ್ಟಿಗಳಾದ ಸಗುಣಾ ಸಿ. ನಾಯ್ಕ್, ಅಂಜು ಎಸ್. ನಾಯ್ಕ್, ಡಾ.ಮುರಳೀಧರ ನಾಯ್ಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತ ಟ್ರಸ್ಟಿ ಸಂಜೀತ್ ನಾಯ್ಕ್ ಸ್ವಾಗತಿಸಿದರು. ರೇಶ್ಮಾ ನಾಯ್ಕ್ ವಂದಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News