ವಿದ್ಯಾರ್ಥಿ ಜೀವನ ಅಮೂಲ್ಯವಾದುದು: ಮುಹಮ್ಮದ್ ಮೋನು
ಕೊಣಾಜೆ, ನ.9: ವಿದ್ಯಾರ್ಥಿ ಜೀವನ ನಮಗೆ ಬಹಳ ಅಮೂಲ್ಯವಾದುದು. ಶಾಲಾ ಜೀವನದಲ್ಲಿ ಪಠ್ಯದ ಜೊತೆ, ಕ್ರೀಡೆಯಲ್ಲೂ ಭಾಗವಹಿಸುವುದು ಮುಖ್ಯ, ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಕಾಪಾಡುವ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರದ್ದಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅಭಿಪ್ರಾಯಪಟ್ಟರು.
ಕೊಣಾಜೆ ಮಂಗಳೂರು ವಿ.ವಿ. ಕ್ರೀಡಾಂಗಣದಲ್ಲಿ ಕೊಣಾಜೆಪದವು ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಬುಧವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮುಂದಿನ ಭವಿಷ್ಯ ಶಾಲಾ ಜೀವನ ನಿರ್ಧರಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಮೈದಾನದಲ್ಲೂ ಕ್ರೀಡೆ ಮುಖಾಂತರ ಬಳಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಕ್ರೀಡೆಯಲ್ಲಿ ಸ್ಪರ್ಧಾಗುಣದ ಹೊರತು ದ್ವೇಷ ಸಾಧನೆ ಬೇಡ. ಶಾಲಾ ಮಟ್ಟದ ಕ್ರೀಡೆ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟ ಪ್ರವೇಶಿಸಿ ಭವಿಷ್ಯ ರೂಪಿಸಿಕೊಳ್ಳಲು ಮುಂದಡಿಯಿಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ ಮಾತನಾಡಿ, ಸ್ಪರ್ಧೆಗೆ ಮುನ್ನ ವಿದ್ಯಾರ್ಥಿಗಳು ಕೈಗೊಂಡ ಪ್ರತಿಜ್ಞೆಯನ್ನು ಪಾಲಿಸಿ ಶಾಲೆ, ಕಲಿಸಿದ ಶಿಕ್ಷಕರ ಗೌರವ ಉಳಿಸಬೇಕು, ತಾಲೂಕು ಮಟ್ಟದ ಕ್ರೀಡಾಕೂಟ ಕೊಣಾಜೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಬಾನು, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ, ಕೊಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಲಿತಾ ರಾವ್, ಸದಸ್ಯ ಅಚ್ಚುತ ಗಟ್ಟಿ, ಮಂಗಳಾ ಸೇವಾ ಟ್ರಸ್ಟ್ ನಿರ್ದೇಶಕ ಅಬ್ದುಲ್ ನಾಸಿರ್, ರವೀಂದ್ರ ರೈ ಹರೇಕಳ, ಉಮ್ಮರ್ ಪಜೀರು, ಅಬ್ದುರ್ರಹ್ಮಾನ್ ಕೋಡಿಜಾಲ್ ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಸ್ವಾಗತಿಸಿದರು.