ದೇರಳಕಟ್ಟೆ ‘ಕ್ಷೇಮ’ದಲ್ಲಿ ಸರ್ಜರಿ ರಹಿತ ನೂತನ ಚಿಕಿತ್ಸಾ ಕ್ರಮ
ಕೊಣಾಜೆ, ನ.9: ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯೊಂದರ ಅಗತ್ಯವಿದ್ದ ಕೇರಳ ಕಣ್ಣೂರಿನ 70ರ ವೃದ್ಧರೊಬ್ಬರಿಗೆ ನಿಟ್ಟೆ ವಿಶ್ವವಿದ್ಯಾಲಯದ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಕಾರ್ಡಿಯೋಲಜಿ ವಿಭಾಗ ಮುಖ್ಯಸ್ಥ ಡಾ. ಸುಬ್ರಮಣ್ಯನ್ ನೇತೃತ್ವದಲ್ಲಿ ಕಳೆದ ವಾರ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ರಹಿತ ಹಾಗೂ ಪ್ರಜ್ಞೆ ತಪ್ಪಿಸದೆ ನೂತನ ಚಿಕಿತ್ಸಾಕ್ರಮದಲ್ಲಿ ಚಿಕಿತ್ಸೆ ನೀಡಲಾಯಿತು.
ಕ್ಷೇಮ ಆಸ್ಪತ್ರೆಯ ಕಾರ್ಡಿಯಾಲಾಜಿಸ್ಟ್‌ಗಳಾದ ಡಾ.ಉಷಾ ಪಿ. ರಾವ್ ಹಾಗೂ ಡಾ. ದಿಲೀಪ್ ಜಾನಿ, ಕಾರ್ಡಿಯೋಥೊರಾಸಿಕ್ ಸರ್ಜರಿ ಸರ್ಜನ್‌ಗಳಾದ ಡಾ. ಎಂ. ಗೋಪಾಲಕೃಷ್ಣನ್, ಡಾ.ಅಮಿತ್ ಕಿರಣ್ ಹಾಗೂ ಅರಿವಳಿಕೆ ವಿಭಾಗ ಮುಖ್ಯಸ್ಥ ಡಾ. ಮಂಜುನಾಥ್ ಕಾಮತ್ ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.
ಹೃದಯದಿಂದ ಹೊರಗೆ ಬರುವ ರಕ್ತನಾಳ ‘ಅಯೋರ್ಟಾ’ ದೇಹದ ಬೇರೆ ಬೇರೆ ಭಾಗಕ್ಕೆ ಹರಡಿರುತ್ತದೆ. ಕೇರಳ ಕಣ್ಣೂರಿನ 70ರ ಹರೆಯದ ವೃದ್ಧರ ರಕ್ತನಾಳಗಳ ಗಾತ್ರ ಸಾಮಾನ್ಯ ವ್ಯಕ್ತಿಯ ಹೊಟ್ಟೆಭಾಗದಲ್ಲಿ ಇರುವ ಗಾತ್ರಕ್ಕಿಂತ ಮೂರು ಪಟ್ಟಿಗಿಂತಲೂ ಹೆಚ್ಚಿದ್ದು ಅದು ಒಡೆದು ಹೋಗುವ ಸಾಧ್ಯತೆಯಿದ್ದು, ಒಡೆದು ಹೋದರೆ ರೋಗಿಯ ಸಾವು ಖಚಿತ. ಹಾಗಾಗಿ ಅದು ಒಡೆಯದಂತೆ ಶಸತ್ರಚಿಕಿತ್ಸೆ ನಡೆಸಬೇಕಾಗುತ್ತದೆ.
ಆದರೆ ಈ ರೋಗಿ ಕಿಡ್ನಿ ಹಾಗೂ ಹೃದಯದ ಕಾಯಿಲೆಗೊಳಗಾಗಿದ್ದರು. ಆ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ಕ್ಲಿಷ್ಟಕರವಾಗಿರುವುದರಿಂದ ಶಸ್ತ್ರಚಿಕಿತ್ಸೆ ರಹಿತ ಹೊಸ ವಿಧಾನ ‘ಸೆಂಟ್ ಗ್ರಾಫ್ಟ್ ಇಂಪ್ಲಾಟೇಶನ್(ಇವಿಎಆರ್)’ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು. ಓಪನ್ ಸರ್ಜರಿಯಲ್ಲಿ ಸಾಮಾನ್ಯವಾಗಿ ಆರರಿಂದ ಏಳು ಗಂಟೆ ತಗಲುವುದಾದರೆ ನೂತನ ಚಿಕಿತ್ಸಾ ಕ್ರಮದಲ್ಲಿ ಸುಮಾರು ಒಂದೂವರೆ ಗಂಟೆಯಲ್ಲಿ ಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆ ಪಡೆದ ರೋಗಿಯು ಗುಣಮುಖರಾಗಿದ್ದು, ಕೇವಲ ಐದು ದಿನಗಳಲ್ಲಿ ಮನೆಗೆ ತೆರಳಿದ್ದಾರೆ.
ಕ್ಷೇಮ ಡೀನ್ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹಾಗೂ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹೀರೆಮಠ್ ಉಪಸ್ಥಿತರಿದ್ದರು.