ತಲಪಾಡಿ: ಗಡಿನಾಡು ಕರ್ನಾಟಕಾ ರಕ್ಷಣಾ ವೇದಿಕೆಯಿಂದ ಸ್ವಚ್ಛತಾ ಅಭಿಯಾನ
ಉಳ್ಳಾಲ, ನ.9: ಮುಂಬರುವ ದಿನಗಳಲ್ಲಿ ಗಡಿನಾಡು ಕರ್ನಾಟಕಾ ರಕ್ಷಣಾ ವೇದಿಕೆಯಿಂದ ಜಿಲ್ಲೆಯಾದ್ಯಂತ ಅರ್ಥಪೂರ್ಣವಾದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಸಿದ್ದೀಕ್ ತಲಪಾಡಿ ಹೇಳಿದರು.
ಗಡಿನಾಡು ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ತಲಪಾಡಿಯ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ಕೆಳಗಿನ ತಲಪಾಡಿ ತನಕ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭಾರತವು ಸ್ವಚ್ಛತಾ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಸವಾಲನ್ನು ಎದುರಿಸುತ್ತಿದೆ. ದ.ಕ. ಜಿಲ್ಲೆಯಲ್ಲೂ ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ದಿನನಿತ್ಯ ಕಸ ವಿಲೇವಾರಿ ನಡೆಯದೆ ಎಲ್ಲಂದರಲ್ಲಿ ಕಸ, ತ್ಯಾಜ್ಯದ ರಾಶಿಗಳೇ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ತಾಲೂಕು ಪಂಚಾಯತ್ ಸದಸ್ಯ ಸಿದ್ದೀಕ್ ಕೊಳಂಗೆರೆ, ಗಡಿನಾಡು ಕರ್ನಾಟಕಾ ರಕ್ಷಣಾ ವೇದಿಕೆ ಉಪಾಧ್ಯಕ್ಷ ಅರುಣ್ ಭಂಡಾರಿ, ಪಟ್ಣ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುರ್ರಹ್ಮಾನ್, ಗ್ರಾ.ಪಂ. ಸದಸ್ಯ ಫಾರೂಕ್, ನಾಗರಿಕ ಸಮಿತಿ ಯುವವೇದಿಕೆ ಅಧ್ಯಕ್ಷ ಪ್ರಮೋದ್ ಉಚ್ಚಿಲ್, ಉಚ್ಚಿಲ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್,ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ರಾಜೇಶ್ ಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.