ನ.27ರಂದು ಮಣಿಪಾಲದಿಂದ ಪಣಂಬೂರು ಬೀಚ್‌ಗೆ ಸೈಕ್ಲತಾನ್
ಕಾಪು, ನ.9: ರಸ್ತೆ ಸುರಕ್ಷತೆ ಮತ್ತು ಇಂಧನ ಉಳಿಸಿ ಆಂದೋಲನದ ಅಂಗವಾಗಿ ಮಣಿಪಾಲದಿಂದ ಪಣಂಬೂರು ಬೀಚ್‌ವರೆಗೆ ಸೈಕಲ್ ರ್ಯಾಲಿ ಸೈಕ್ಲತಾನ್ ಕಾರ್ಯಕ್ರಮ ನ.27ರಂದು ನಡೆಯಲಿದೆ.
ಸುಭಾಶ್ ನಗರ ರೋಟರ್ಯಾಕ್ಟ್ ಕ್ಲಬ್, ಮಂಗಳೂರು ಪ್ರೀಮಿಯರ್ ಲೀಗ್, ಮಣಿಪಾಲ ವಿ.ವಿ. ಕ್ರೆಡಾ ಸಮಿತಿ, ಉಡುಪಿ ಸೈಕ್ಲಿಂಗ್ ಕ್ಲಬ್ ಮತ್ತು ಮಂಗಳೂರು ಸೈಕ್ಲಿಂಗ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಭಾಸ್‌ನಗರ ರೋಟರ್ಯಾಕ್ಟ್ ಕ್ಲಬ್ ಪ್ರತಿನಿಧಿ ಚಂದ್ರ ಪೂಜಾರಿ ತಿಳಿಸಿದರು.
ಮಣಿಪಾಲ ಕೆಎಂಸಿ ಗ್ರೀನ್ಸ್‌ನಿಂದ ಹೊರಡುವ ಸೈಕ್ಲತಾನ್ ಉಡುಪಿ, ಕಟಪಾಡಿ, ಶಿರ್ವ, ಮುದರಂಗಡಿ, ಪಡುಬಿದ್ರೆ, ಮುಲ್ಕಿ ಮಾರ್ಗವಾಗಿ ಪಣಂಬೂರು ಬೀಚ್‌ನ್ನು ತಲುಪಲಿದೆ ಎಂದರು.
ಉಡುಪಿ ಸೈಕ್ಲಿಂಗ್ ಕ್ಲಬ್‌ನ ಸಂಘಟಕ ವಿನೋದ್ ಬಂಗೇರ ಮಾತನಾಡಿ, ನ. 27ರಂದು ಮಧ್ಯಾಹ್ನ 1 ಗಂಟೆಗೆ ಪ್ರಾರಂಭಗೊಳ್ಳುವ ಸೈಕ್ಲತಾನ್ ಸುಮಾರು 70 ಕಿ.ಮೀ. ದೂರದವರೆಗೆ ಸಾಗಿ ಸಂಜೆ 6ಗಂಟೆಗೆ ಪಣಂಬೂರು ತಲುಪುವ ನಿರೀಕ್ಷೆಯಿದೆ. ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿದಂತೆ 50 ಕ್ಕೂ ಅಧಿಕ ಮಂದಿ ಸೈಕಲ್ ಸವಾರರು ಬಾಗವಹಿಸಲಿದ್ದಾರೆ. ಬಳಿಕ ಎಂಪಿಎಲ್ ಫೆಸ್ಟ್ ಕಾರ್ಯಕ್ರಮ ಸಮಾಪನಗೊಳ್ಳಲಿದೆ ಎಂದರು.
ಎಂಪಿಎಲ್ ಟ್ರೋಫಿ ಅನಾವರಣ
ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಎಂ.ಪಿ.ಎಲ್ ಸಂಘಟಕ ಸಿರಾಜುದ್ದೀನ್ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರಾರಂಭಿಸಲಾಗಿರುವ ಮಂಗಳೂರು ಪ್ರೀಮಿಯರ್ ಲೀಗ್‌ನ ಟ್ರೋಫಿ ಅನಾವಣ ಹಾಗು ಎಂಪಿಎಲ್ ಫೆಸ್ಟ್ ಕೂಡಾ ನ.27ರಂದು ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಈ ಬಾರಿಯ ಮಂಗಳೂರು ಪ್ರೀಮಿಯರ್ ಲೀಗ್ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. 20-20 ಕ್ರಿಕೆಟ್ ಪಂದ್ಯಾಟದಲ್ಲಿ 12 ತಂಡಗಳು ಭಾಗವಹಿಸಲಿದ್ದು, ಉಡುಪಿ ಜಿಲ್ಲೆಯ ಮೂರು ತಂಡಗಳು ಭಾಗವಹಿಸಲಿವೆ ಎಂದರು. ರೆನ್ ಟ್ರವೆರ್ ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.