×
Ad

ಕಿಕ್ ಹರ್,‘ಲಾಕ್ ಹರ್ ಅಪ್’ ಎಂದು ಸಭಿಕರು ಕೂಗಿದರು!

Update: 2016-11-09 19:02 IST

ನ್ಯೂಯಾರ್ಕ್, ನ. 9: ಹೆಚ್ಚಿನ ಅಮೆರಿಕನ್ನರು ಯಾವತ್ತೂ ನೋಡ ಡೊನಾಲ್ಡ್ ಟ್ರಂಪ್‌ರ ದರ್ಶನ ಬುಧವಾರ ಆಯಿತು.
ಬುಧವಾರ ಮುಂಜಾನೆ ಸುಮರು 2:45ರ ವೇಳೆಗೆ ಟ್ರಂಪ್‌ರನ್ನು ನಿಯೋಜಿತ ಅಧ್ಯಕ್ಷ ಎಂಬುದಾಗಿ ಘೋಷಿಸಲಾಯಿತು. ಸ್ವಲ್ಪ ಸಮಯದ ಬಳಿಕ ತನ್ನ ಪರವಾಗಿ ಜೈಕಾರ ಹಾಕುತ್ತಿದ್ದ ಸಭಿಕರ ಸಮ್ಮುಖ ಟ್ರಂಪ್ ಹಾಜರಾದರು.

ಹಿಂದೆ ಚುನಾವಣಾ ಪ್ರಚಾರದ ವೇಳೆ ತನ್ನ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ವಿರುದ್ಧ ಟ್ರಂಪ್ ಹರಿ ಹಾಯುತ್ತಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಅವರು ಈ ಬಾರಿ ಹಿಲರಿಯನ್ನು ಶ್ಲಾಘಿಸಿದರು, ದೇಶದ ಜನಾಂಗೀಯ ವೈವಿಧ್ಯತೆಯನ್ನು ಪ್ರಶಂಸಿಸಿದರು ಹಾಗೂ ಎಲ್ಲರನ್ನೂ ಪ್ರತಿನಿಧಿಸುವ ಭರವಸೆ ನೀಡಿದರು.

‘‘ಹಿಲರಿ ಸುದೀರ್ಘ ಕಾಲಾವಧಿಯಲ್ಲಿ ಕಠಿಣ ಪರಿಶ್ರಮ ಪಟ್ಟಿದ್ದಾರೆ. ನಮ್ಮ ದೇಶಕ್ಕೆ ನೀಡಿರುವ ಸೇವೆಗಾಗಿ ನಾವು ಅವರಿಗೆ ಆಭಾರಿಯಾಗಿರಬೇಕು’’ ಎಂದು ಟ್ರಂಪ್ ಹೇಳಿದರು. ಈ ವೇಳೆಗಾಗಲೇ ಟ್ರಂಪ್ ಸಂಪೂರ್ಣವಾಗಿ ಬದಲಾಗಿ ಹೋಗಿದ್ದರು.
‘‘ನಾನು ಇದನ್ನು ಗಂಭೀರವಾಗಿ ಹೇಳುತ್ತಿದ್ದೇನೆ. ಈಗ ಅಮೆರಿಕಕ್ಕೆ ವಿಭಜನೆಯ ಗಾಯಗಳನ್ನು ಹೊಲಿಯುವ ಸಮಯ. ಇದು ನಾವು ಒಂದಾಗಿ ಜೊತೆಯಾಗಿರಬೇಕಾದ ಸಮಯ’’ ಎಂದರು.

 ಅಬ್ಬರದ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಮಾತು ಮಾತಿಗೆ ‘ಲಾಕ್ ಹರ್ ಅಪ್’ (ಆಕೆಯನ್ನು ಬಂಧನದಲ್ಲಿಡಿ) ಎಂದು ಹೇಳುತ್ತಿದ್ದರು. ಅವರ ಈ ಮಾತುಗಳು ಮತದಾರರಿಗೂ ಒಗ್ಗಿ ಹೋಗಿತ್ತು. ಹಾಗಾಗಿ, ಕೆಲವೇ ನಿಮಿಷಗಳ ಮೊದಲು ಇಲ್ಲಿ ಸೇರಿದ್ದ ಟ್ರಂಪ್ ಅಭಿಮಾನಿಗಳು ಟ್ರಂಪ್‌ರ ಪರಿಚಿತ ಮಾತುಗಳನ್ನೇ ಪುನರುಚ್ಚರಿಸಿ ‘ಲಾಕ್ ಹರ್ ಅಪ್’, ‘ಲಾಕ್ ಹರ್ ಅಪ್’ ಎಂಬುದಾಗಿ ಚೀರುತ್ತಿದ್ದರು.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಹಿಲರಿ ಕ್ಲಿಂಟನ್ ಖಾಸಗಿ ಇಮೇಲ್ ಸರ್ವರ್ ಬಳಸಿದ್ದ ಪ್ರಕರಣದಲಿ,್ಲ ವಿಶೇಷ ಪ್ರಾಸಿಕ್ಯೂಟರ್‌ನ್ನು ನೇಮಿಸಿ ಆಕೆಯನ್ನು ಜೈಲಿಗೆ ತಳ್ಳುವುದಾಗಿಯೂ ಇತ್ತೀಚಿನ ವಾರಗಳಲ್ಲಿ ಟ್ರಂಪ್ ಹೇಳಿದ್ದರು.
ಆದರೆ, ಚುನಾವಣಾ ಫಲಿತಾಂಶವನ್ನು ಹಿಲರಿ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಟ್ರಂಪ್ ಸಂಪೂರ್ಣ ಬದಲಾಗಿದ್ದರು.

ಸ್ನೇಹಪರವಾಗಿ ವರ್ತಿಸಿದ ಅವರು ನಯವಾದ ಮಾತುಗಳನ್ನು ಬಳಸಿದರು, ಉದಾತ್ತವಾಗಿ ವರ್ತಿಸಿದರು. ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆ ಕಟ್ಟುವ, ಮುಸ್ಲಿಮರನ್ನು ನಿಷೇಧಿಸುವ ಅಥವಾ ಅಕ್ರಮ ವಲಸಿಗರನ್ನು ಸಾಮೂಹಿಕವಾಗಿ ಗಡಿಪಾರು ಮಾಡುವ ಯಾವುದೇ ಮಾತುಗಳನ್ನು ಅವರು ಆಡಲಿಲ್ಲ.

 ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ (ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ದೇಶವನ್ನಾಗಿ ಮಾಡಿ) ಎಂಬ ಬರಹದ ಹ್ಯಾಟ್‌ಗಳನ್ನು ಧರಿಸಿದ ನೂರಾರು ಮಂದಿಯ ಸಮ್ಮುಖದಲ್ಲಿ ಹಾಜರಾದ ಟ್ರಂಪ್ ಸಭಿಕರತ್ತ ಮುಗುಳುನಕ್ಕು ಕೈಬೀಸಿದರು. ಹಾಗೂ ಸಭಿಕರ ಜೊತೆಗೆ ಕರತಾಡನ ಮಾಡಿದರು.
ಅವರ ಜೊತೆಯಲ್ಲಿ ಪತ್ನಿ ಮೆಲಾನಿಯಾ ಇದ್ದರು. ಸ್ಲೊವೇನಿಯದಲ್ಲಿ ಜನಿಸಿದ ಮೆಲಾನಿಯಾ 2006ರಲ್ಲಿ ಅಮೆರಿಕದ ನಾಗರಿಕರಾಗಿದ್ದರು.
‘‘ಪತ್ರಿಯೊಬ್ಬ ಅಮೆರಿಕನಿಗೂ ಏಳಿಗೆ ಹೊಂದಲು ಸಾಧ್ಯವಾಗುತ್ತದೆ’’ ಎಂದರು.
‘‘ನಮ್ಮ ದೇಶದ ಭವಿಷ್ಯವನ್ನು ನಾವು ಮತ್ತೆ ರೂಪಿಸಬೇಕು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News