ಹೊಸ ರೂ. 500-2000ದ ನೋಟುಗಳಲ್ಲಿ ನಕಲಿಗೆ ಕಠಿಣವಾದ ಉನ್ನತ ಭದ್ರತಾಂಶ
ಹೊಸದಿಲ್ಲಿ, ನ.9: ರಿಸರ್ವ್ ಬ್ಯಾಂಕ್ ಶುಕ್ರವಾರದಿಂದ ರೂ. 500 ಹಾಗೂ ರೂ. 2,000 ಮುಖಬೆಲೆಯ ಹೊಸ ನೋಟುಗಳಲ್ಲಿ ಹೊರ ಹಾಕಲಿದೆ. ಇದು ಭಾರೀ ಭದ್ರತೆಯ ನೋಟುಗಳೆನಿಸಲ್ಪಟ್ಟಿದ್ದು, ಹಲವು ಹೊಸ ಭದ್ರತಾ ಚಿನ್ಹೆಗಳನ್ನು ಒಳಗೊಂಡಿರುತ್ತವೆ. ಆದುದರಿಂದ ನಿನ್ನೆ ರಾತ್ರಿ ರದ್ದುಪಡಿಸಲಾಗಿರುವ ರೂ. 500 ಹಾಗೂ ರೂ. 1000 ನೋಟುಗಳಷ್ಟು ಸುಲಭವಾಗಿ ನಕಲು ಮಾಡಲು ಸಾಧ್ಯವಿಲ್ಲ.
ಶುಕ್ರವಾರ ಎಟಿಎಂಗಳು ಪುನರಾರಂಭಗೊಂಡ ಬಳಿಕ ಈ ಹೊಸ ನೋಟುಗಳು ಲಭಿಸಲಿದೆಯೆಂದು ಹಣಕಾಸು ಕಾರ್ಯದರ್ಶಿ ಅಶೋಕ್ ಲವಾಸಾ ಇಂದು ಇಲ್ಲಿ ತಿಳಿಸಿದ್ದಾರೆ.
ಬಿಡುಗಡೆ ಮಾಡಲಾಗುವ ಹೊಸ ನೋಟುಗಳ ಮೇಲೆ ಆರ್‌ಬಿಐ ನಿಕಟ ನಿಗಾ ಇರಿಸಲಿದೆ. ರೂ. 500 ಹಾಗೂ ರೂ. 1000ದ ನೋಟುಗಳನ್ನು ಏಕಾಏಕಿಯಾಗಿ ಹಿಂಪಡೆಯುವ ಸರಕಾರದ ಮಂಗಳವಾರ ರಾತ್ರಿಯ ಘೋಷಣೆಯ ಹಿಂದಿನ ಉದ್ದೇಶ ಕಪ್ಪು ಹಣ ಹಾಗೂ ನಕಲಿ ನೋಟುಗಳನ್ನು ಮಟ್ಟ ಹಾಕುವುದಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬಹುದೆಂದು ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
ಹೊಸ ರೂ. 2000ದ ನೋಟಿನಲ್ಲಿ , ಅದನ್ನು ಬೆಳಕಿನೆದುರು ಹಿಡಿದಾಗ 2000 ಎಂಬ ಸಂಖ್ಯೆಯೊಂದಿಗೆ ಪಾರದರ್ಶಕ ರಿಜಿಸ್ಟರ್‌ನಂತಹ ಅನೇಕ ಭದ್ರತಾಂಶಗಳಿರುತ್ತವೆ. ನೋಟನ್ನು ಕಣ್ಣ ದೃಷ್ಟಿಗೆ 45 ಡಿಗ್ರಿ ಕೋನದಲ್ಲಿ ಹಿಡಿದಾಗ 2000 ಎಂಬ ಸಂಖ್ಯೆಯೊಂದಿಗೆ ಗುಪ್ತ ಪ್ರತಿಬಿಂಬವೊಂದನ್ನು ಕಾಣಬಹುದು.
ರೂ. 2000ದ ನೋಟಿನಲ್ಲಿ ಬಣ್ಣ ವರ್ಗಾಯಿಸುವ ಕಿಟಕಿಯುಳ್ಳ ಭದ್ರತಾ ನೂಲು ಇದ್ದು, ಅದರಲ್ಲಿ ‘ಭಾರತ್’ ಎಂದು ದೇವನಾಗರಿ ಲಿಪಿಯಲ್ಲಿ, ಆರ್‌ಬಿಐ ಹಾಗೂ 2000 ಎಂದು ಕೊರೆಯಲಾಗಿರುತ್ತದೆ. ನೋಟನ್ನು ವಾಲಿಸಿದಾಗ ನೂಲಿನ ಬಣ್ಣವು ಹಸಿರಿನಿಂದ ನೀಲಿಗೆ ಬದಲಾಗುತ್ತದೆ.
ದೃಷ್ಟಿ ಮಾಂದ್ಯರಿಗೆ ನೋಟನ್ನು ಗುರುತಿಸಲು ಅನುಕೂಲವಾಗುವಂತೆ ಮಹಾತ್ಮಾ ಗಾಂಧಿ, ಅಶೋಕ ಸ್ತಂಭದ ಲಾಂಛನ, ಗೆರೆಗಳು ಹಾಗೂ ಗುರುತು ಚಿನ್ಹೆಗಳ ಉಬ್ಬು ಮುದ್ರಣವಿರುತ್ತದೆ.
ರೂ. 2000ದ ನೋಟಿನಲ್ಲಿ ಮಂಗಳಯಾಬದ ಚಿತ್ರವಿದ್ದು, ಮೂಲ ಬಣ್ಣವು ಪ್ರಖರ ನೀಲಿ ಮಿಶ್ರಿತ ಕೆಂಪಾಗಿರುತ್ತದೆ (ಮೆಜೆಂಟಾ) ಎಂದು ಆರ್‌ಬಿಐ ವಿವರಿಸಿದೆ.