×
Ad

500-1000 ರೂ. ನೋಟು ಅಮಾನ್ಯದಿಂದ ಜನರಿಗೆ ಗೊಂದಲ: ಸಿಪಿಎಂ

Update: 2016-11-09 20:07 IST

ಉಡುಪಿ, ನ.9: 500 ಮತ್ತು 1000ರೂ.ಮೌಲ್ಯದ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿ ಚಲಾವಣೆಯಿಂದ ಹಿಂದೆಗೆದುಕೊಂಡಿದ್ದರಿಂದ ಬ್ಯಾಂಕ್ ಖಾತೆಗಳಿಲ್ಲದ ಜನಸಾಮಾನ್ಯರಿಗೆ ತೊಂದರೆ ಆಗಲಿದ್ದು, ಇದು ಕಪ್ಪುಹಣ ತಡೆಗೆ ಸಹಕಾರಿಯಾಗುವುದಿಲ್ಲ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ.

ಕಪ್ಪು ಹಣ ವಿದೇಶದಲ್ಲಿದೆ ಎಂದು ಮೋದಿ ಅವರು ಪ್ರಧಾನಿಯಾಗುವ ಮೊದಲೇ ಘೋಷಿಸಿದ್ದರು. ಆದರೆ ವಿದೇಶದಿಂದ ಕಪ್ಪುಹಣ ತರುವ ಯಾವುದೇ ಪ್ರಯತ್ನವನ್ನು ನಡೆಸಲಿಲ್ಲ. ದೇಶಕ್ಕೆ ಸಲ್ಲಬೇಕಾದ ತೆರಿಗೆ ತಪ್ಪಿಸಲು ಮಾರಿಷಸ್ ಮೊದಲಾದ ದೇಶಗಳಲ್ಲಿ ಬೇನಾಮಿ ಕಂಪೆನಿಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಬೃಹತ್ ಕಾರ್ಪೋರೇಟ್ ಕಂಪೆನಿಗಳಿಂದ ಮೂರು ಲಕ್ಷ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಕೆಟ್ಟಸಾಲವನ್ನು (ಅನುತ್ಪಾದಕ ಆಸ್ತಿ- ಎನ್‌ಪಿಎ) ವಸೂಲಿ ಮಾಡಲು ಸಾಧ್ಯವಾಗಿಲ್ಲ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಸುಸ್ತಿದಾರ ಎಂದು ಘೋಷಿಸಲ್ಪಟ್ಟ ವಿಜಯ ಮಲ್ಯರಿಂದ ಚಿಕ್ಕಾಸೂ ವಸೂಲಿ ಮಾಡಲು ಸಾಧ್ಯವಾಗಿಲ್ಲ. ಕಪ್ಪುಹಣ ಇರುವವರು ಈಗಾಗಲೇ ರಿಯಲ್ ಎಸ್ಟೇಟ್, ಚಿನ್ನ ಮತ್ತಿತರ ಬೇನಾಮಿ ಖಾತೆಗಳಲ್ಲಿ ತೊಡಗಿಸಿದ್ದಾರೆ. ಭಯೋತ್ಪಾದಕರಿಗೆ ಬರುತ್ತಿರುವ ಹಣ ಎಲೆಕ್ಟ್ರೋನಿಕ್ ವರ್ಗಾವಣೆ ಮೂಲಕ ಬರುತ್ತಿರುವುದರಿಂದ ಅವರ ಚಟುವಟಿಕೆಗಳನ್ನು ನಿಲ್ಲಿಸಲು, ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದರಿಂದ ಸಾಧ್ಯವಾಗುವುದಿಲ್ಲ.
ಇನ್ನು ನಕಲಿ ನೋಟುಗಳ ಬಗ್ಗೆ ಹೇಳುವುದಾದರೆ ಇದು ತಾತ್ಕಾಲಿಕ ಉಪಶಮನ. ಆಡಳಿತ ಯಂತ್ರ ಬಿಗಿಗೊಳಿಸದೇ ಮುಂದೆ ಬರುವ 2000 ಹಾಗೂ 500 ರೂ. ನೋಟುಗಳ ನಕಲಿ ಸಹಾ ತಡೆಯಲು ಸಾಧ್ಯವಿಲ್ಲ ಎಂದು ಸಿಪಿಎಂ ಅಭಿಪ್ರಾಯ ಪಟ್ಟಿದೆ.

 ಎರಡೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮಾ ಇತ್ಯಾದಿ ಭರವಸೆ ನೀಡಿತ್ತು.ಅದರ ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 500 ಮತ್ತು 1000 ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿರುವುದು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕುತಂತ್ರ ಮಾತ್ರ ಎಂದು ಸಿಪಿಎಂ ಟೀಕಿಸಿದೆ.
 
 ಪ್ರಧಾನಿಯ ದಿಟ್ಟ ಕ್ರಮ:ಮಟ್ಟಾರ್: ಬೃಹತ್ ಆರ್ಥಿಕ ಸುಧಾರಣೆಯ ಕ್ರಮವಾಗಿ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ 500 ಮತ್ತು 1,000ರೂ. ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಕ್ರಮ ಶ್ಲಾಘನೀಯವಾಗಿದೆ ಎಂದು ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಚಲಾವಣೆಯಲ್ಲಿರುವ ಶೇ.40ಕ್ಕಿಂತಲೂ ಹೆಚ್ಚು ಕಳ್ಳ ನೋಟುಗಳು ಮತ್ತು ಕಪ್ಪುಹಣದ ಮೇಲಿನ ಈ ಕ್ರಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉನ್ನತಿಕರಿಸುವುದರಲ್ಲಿ ಸಂಶಯವಿಲ್ಲ ಎಂದವರು ಅಭಿಪ್ರಾಯ ಪಟ್ಟಿದ್ದಾರೆ. 1977ರಲ್ಲಿ ಅಂದಿನ ಪ್ರಧಾನಿ ಮೋರಾರ್ಜಿ ದೇಸಾಯಿ ತೆಗೆದುಕೊಂಡ ಕ್ರಮದ ಬಳಿಕ 39 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರ ಈ ದಿಟ್ಟ ಕ್ರಮದಿಂದ ದೇಶದ ಹಣಕಾಸು ವ್ಯವಹಾರದಲ್ಲಿ ಸಮಗ್ರ ಸುಧಾರಣೆಯನ್ನು ಕಾಣಬಹುದಾಗಿದೆ ಎಂದು ಹೆಗ್ಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News